ಬಿ.ಸಿ.ರೋಡಿನಲ್ಲಿ ಮೆರುಗು ನೀಡಿದ "ವಿಶೇಷ ಚೇತನ ಮಕ್ಕಳ ಹಬ್ಬ"

Update: 2019-02-23 17:04 GMT

ಬಂಟ್ವಾಳ, ಫೆ. 23: ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಶನಿವಾರ ವಿಶೇಷ ಚೇತನ ಮಕ್ಕಳದ್ದೆ ಕಲರವ. "ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ" ಎಂಬ ಘೋಷವಾಕ್ಯದೊಂದಿಗೆ ನಡೆದ ವಿಶೇಷ ಚೇತನ ಮಕ್ಕಳ ಹಬ್ಬ ಸಂಘಟಕರ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿತು.

ನರಿಕೊಂಬು ಸೇವಾದಳದ ಮಕ್ಕಳ ಬ್ಯಾಂಡ್‍ಗೆ ವಿಶೇಷ ಚೇತನದ ಮಕ್ಕಳು ಕುಣಿದು ಕುಪ್ಪಳಿಸಿ ಖುಷಿಪಟ್ಟರು. ಮಕ್ಕಳೆ ಗೊಂಬೆಯ ಮುಖವಾಡ ಧರಿಸಿ ಸಭಾಂಗಣದ ಸುತ್ತ ಓಡಾಡಿ ಸಂತಸಪಟ್ಟರು.  

ವಿಕಲಚೇತನರ ಚೆಸ್ ಪಂದ್ಯಾಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕಡೇಶಿವಾಯದ ಯಶಸ್ವಿನಿಯ ಅಧ್ಯಕ್ಷತೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ವಿಶೇಷ ಚೇತನ ಮಕ್ಕಳ ಹಬ್ಬ ವಿಶೇಷ ಗಮನ ಸೆಳೆಯಿತು. ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿವಿಧ ಶಿಕ್ಷಕ ಹಾಗೂ ನೌಕರರ ಸಂಘಟನೆಗಳ ಹಾಗೂ ವಿಶೇಷ ಚೇತನ ಮಕ್ಕಳ ಹಬ್ಬ ಆಚರಣಾ ಸಮಿತಿ, ತಾಲೂಕು ಮಟ್ಟದ ವಿವಿಧ 27 ಇಲಾಖೆ ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಈ ಹಬ್ಬದಲ್ಲಿ ವಿಶೇಷ ಚೇತನ ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಸಂಭ್ರಮಪಟ್ಟರು. 

ಬೆಲ್ಲ ನೀರಿನ ಸ್ವಾಗತ:

ಗಣ್ಯರ ಸಹಿತ ಈ ಹಬ್ಬಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತದ್ವಾರದಲ್ಲಿ ಶಿಕ್ಷಕಿಯರು ಬೆಲ್ಲ, ನೀರುಕೊಟ್ಟು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಇದೇ ವೇಳೆ ಕೆಂಪು ಮತ್ತು ಹಳದಿ ಬಣ್ಣದ ಗುಲಾಬಿ ಹೂವನ್ನಿತ್ತು ಬರಮಾಡಿಕೊಂಡರು. ಹಾಗೆಯೇ ಇದರ ಪಕ್ಕವೇ ದಣಿವಾರಿಸಲು ಕಬ್ಬಿನ ತಾಜಾರಸವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ವಿಶೇಷ ಮಕ್ಕಳ ಕವನಸಂಕಲನ ಬಿಡುಗಡೆ:

ಎಸ್‍ವಿಎಸ್ ಪ್ರೌಢ ಶಾಲೆಯ 9ನೆ ತರಗತಿಯ ಕೌಶಿಕ್ ಕಂಚಿಕಾರಪೇಟೆ ಹಾಗೂ ಎಸ್‍ವಿಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಭಾಗ್ಯಶ್ರೀ ಕುರಿಯಾಳ ಅವರು ಬರೆದ ಕವನಸಂಕಲನವನ್ನು ಸ್ವಾಗತದ್ವಾರದಿಂದ ವಿಕಲಚೇತನ ಮಕ್ಕಳು ಹೂಅಲಂಕೃತವಾದ ಪಲ್ಲಕಿಯ ಮೂಲಕ ನರಿಕೊಂಬು ಸೇವಾದಳದ ಮಕ್ಕಳ ವಾದ್ಯಗೋಷ್ಠಿಯಲ್ಲಿ ವೇದಿಕೆಗೆ ಹೊತ್ತೊಯ್ದಕೊಂಡು ತಂದರು. ಬಳಿಕ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಕವನಸಂಕಲನವನ್ನು ಬಿಡುಗಡೆಗೊಳಿಸಿದರು.

ಪ್ಲೇಕಾರ್ಡ್ ಪ್ರದರ್ಶಿಸಿ ಉದ್ಘಾಟನೆ:

ವಿಶೇಷ ಚೇತನ ಮಕ್ಕಳ ಹಬ್ಬವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರ ಸಮ್ಮುಖದಲ್ಲಿ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಲಾಯಿತು. "ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ" ಎಂಬ ಘೋಷವಾಕ್ಯದ ಪ್ಲೇಕಾಡ್9ನ್ನು ಮಕ್ಕಳು ಲಯಬದ್ದವಾಗಿ ನಿಂತು ಪ್ರದರ್ಶಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.                         

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳ ಮನರಂಜಿಸುವ ಜಾದು ಪ್ರದರ್ಶನವು ನಡೆಯಿತು.  500ಕ್ಕೂ ಅಧಿಕ ಮಂದಿ ವಿಕಲಚೇತನ ಮಕ್ಕಳು ಅವರ ಪೋಷಕರು ಭಾಗವಹಿಸಿದ್ದರು.

ಉಚಿತ 28 ಸ್ಟಾಲ್‍ಗಳು:

ವಿಶೇಷ ಚೇತನ ಮಕ್ಕಳು ತಮ್ಮ ಸಂತೋಷದ ಕ್ಷಣಗಳನ್ನು ಕಳೆಯಲು ಸುಮಾರು 28 ಸ್ಟಾಲ್‍ಗಳನ್ನು ತೆರೆಯಲಾಗಿತ್ತು. ಈ ಸ್ಟಾಲ್ ಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ, ಆಟಿಕೆ ಸಾಮಾಗ್ರಿ, ತಿಂಡಿ ತಿನಸುಗಳು, ಮ್ಯಾನ್‍ಕ್ರಾಷ್ಟ್, ಪುಸ್ತಕ, ಕ್ಲೆ-ಮೋಡೆಲ್, ನೀರಿನ ಬಾಟ್ಲಿ,ಸ್ಮೈಲಿಂಗ್ ಬಾಲ್, ಬೆಲೂನ್, ಕ್ರೆಯಾನ್ಸ್, ಪ್ಲಾಸ್ಟಿಕ್ ಬಾಕ್ಸ್‍ಕಿಟ್, ಚಾಕಲೇಟ್, ಕರವಸ್ತ್ರ, ಪೌಚ್ ಹೀಗೆ ಇನ್ನಿತರ ವಸ್ತುಗಳನ್ನು 28 ಸ್ಟಾಲ್‍ಗಳಲ್ಲಿ ವಿಶೇಷ ಮಕ್ಕಳಿಗೆ ಉಚಿತವಾಗಿ ನೀಡಲಾಯಿತು.

ಬಣ್ಣದ ಬೆಲೂನ್, ಬಟ್ಟೆಗಳನ್ನು ಜೋಡಿಸಿ ಸ್ಟಾಲ್‍ಗಳನ್ನು ಸಿಂಗಾರಮಾಡಲಾಗಿದ್ದು, ಎಲ್ಲರ ಗಮನಸೆಳೆಯಿತು. ಕರಕುಶಲ, ಚಿತ್ರಕಲೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ನಮಗೆ ಅನುಕಂಪಬೇಡ. ನಮ್ಮಲ್ಲಿ ಸೂಕ್ತ ಪ್ರತಿಭೆಗಳಿದ್ದು, ನಮಗೆ ಅವಕಾಶ ಕೊಟ್ಟರೆ, ಆಕಾಶ ಮುಟ್ಟಬಲ್ಲೆವು. ಈ  ಕಾರ್ಯಕ್ರಮ ನಮಗೆ ತುಂಬಾ ಖುಷಿಕೊಟ್ಟಿದೆ. ಕಾರ್ಯಕ್ರಮದ ಆಯೋಜಕರಿಗೆ ಕೃತಜ್ಞತೆಗಳು.
-ದೀಪಾ, ವಿಕಲಚೇತನ ಯುವತಿ.

ಎಲ್ಲರ ಸಹಕಾರದಿಂದ ನಮ್ಮ ಮೊದಲ ಪ್ರಯತ್ನ, ಯಶಸ್ವಿಯಾಗಿದ್ದು, ವಿಕಲಚೇತನ ಮಕ್ಕಳು ನಿರೀಕ್ಷೆಗೂ ಮೀರಿ ಪೆÇೀಷಕರೊಂದಿಗೆ ಭಾಗವಹಿಸಿ ಸಂಭ್ರಮಿಸಿರುವುದು ನಮಗೆ ಖುಷಿ ಕೊಟ್ಟಿದೆ.
-ಸುರೇಖಾ ಯಳವರ, ಕ್ಷೇತ್ರ ವಿಶೇಷ ಸಂಪನ್ಮೂಲ ಶಿಕ್ಷಕಿ 

ವಿಶೇಷ ಚೇತನ ಮಕ್ಕಳ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ. ಸರಕಾರದಿಂದ ಗುರುತಿಸಲ್ಪಟ್ಟ ಸುಮಾರು 500 ಮಂದಿ ವಿಕಲಚೇತನರು ಬಂಟ್ವಾಳ ತಾಲೂಕಿನಲ್ಲಿದ್ದು, ಇವರಲ್ಲಿ ಗೃಹಾಧರಿತ ವಿಶೇಷ ಮಕ್ಕಳನ್ನು ಹೊರತು ಪಡಿಸಿ ಸುಮಾರು 400 ಮಕ್ಕಳು ಭಾಗವಹಿಸಿದ್ದಾರೆ.

-ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News