ಪ್ರಾಮಾಣಿಕತೆ ನ್ಯಾಯಾಧೀಶರ ಜೀವನ ಕ್ರಮವಾಗಬೇಕು-ನ್ಯಾ. ಅಬ್ದುಲ್ ನಝೀರ್

Update: 2019-02-23 17:06 GMT

ಪುತ್ತೂರು, ಫೆ. 23: ನ್ಯಾಯಾಧೀಶರ ಜೀವನ ಕ್ರಮ ಅಷ್ಟು ಸುಲಭವಲ್ಲ. ಈ ಪವಿತ್ರ ವೃತ್ತಿ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಜೀವನ ಕ್ರಮವಾಗಬೇಕು. ನ್ಯಾಯಾಧೀಶರು ನ್ಯಾಯಪರತೆ, ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.

ಅವರು ಶನಿವಾರ ಪುತ್ತೂರು ನ್ಯಾಯಾಲಯದ ಸಭಾಂಗಣದಲ್ಲಿ ಪುತ್ತೂರು ಬಾರ್ ಎಸೋಸಿಯೇಶನ್ ವತಿಯಿಂದ `ನ್ಯಾಯದ ನೆರಳು ಅರಿವಿನೆಡೆಗೆ' ಎಂಬ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಪುತ್ತೂರು ಮೂಲದ ಮಹಮ್ಮದ್ ನವಾಝ್ ಅವರ ಸನ್ಮಾನ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ `ನ್ಯಾಯದ ನೆರಳು ಅರಿವಿನ ಕಡೆಗೆ' ಕೃತಿಯನ್ನು ನ್ಯಾಯವಾದಿ ಅಬ್ದುಲ್ ನಝೀರ್ ಬಿಡುಗಡೆಗೊಳಿಸಿದರು. ಕೃತಿಯ ಬಗ್ಗೆ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಮಾತನಾಡಿದರು. 

ಈ ಸಂದರ್ಭದಲ್ಲಿ ಹೈಕೋರ್ಟ್‍ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಪುತ್ತೂರು ದರ್ಬೆ ನಿವಾಸಿ ದಿ.ಉಸ್ಮಾನ್ ಹಾಜಿಯವರ ಪುತ್ರ ಮಹಮ್ಮದ್ ನವಾಝ್ ಅವರನ್ನು  ಪುತ್ತೂರು ವಕೀಲರ ಸಂಘದ ಪರವಾಗಿ ರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಸನ್ಮಾನಿಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಚ್ಚನ್ಯಾಯಾಲಯದ ನ್ಯಾಯಾಧೀಶ ಮಹಮ್ಮದ್ ನವಾಝ್, ಕಠಿಣ ಪರಿಶ್ರಮ ವಕೀಲ ವೃತ್ತಿಯ ಯಶಸ್ಸಿನ ಗುಟ್ಟಾಗಿದೆ. ಸತತ ಅಧ್ಯಯನದಿಂದ ಯುವ ವಕೀಲರು ತಮ್ಮ ವೃತ್ತಿ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ವೈ. ಸದಾನಂದ ಪಕ್ಕಳ ಅವರು ವಕೀಲರ ಸಂಘಕ್ಕೆ ರೂ.  1ಲಕ್ಷ ಮೌಲ್ಯದ ಕಾನೂನು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. 

ಕಾರ್ಯಕ್ರಮದಲ್ಲಿ ವೈ. ಸದಾನಂದ ಪಕ್ಕಳ, ಸ್ಮರಣಸಂಚಿಕೆಯ ಸಂಪಾದಕ ಮಹೇಶ್ ಕೆ. ಸವಣೂರು, ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ದ.ಕ.ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಾಧೀಶ ಬಿ. ವೀರಪ್ಪ, ಸರ್ವೋಚ್ಚ ನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಎಪಿಎಂಸಿ ಉಪಾಧ್ಯಕ್ಷರಾಗಿ ನೇಮಕಗೊಂಡ ಪುತ್ತೂರು ಬಾರ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿಯಾದ ಎನ್.ಎಸ್. ಮಂಜುನಾಥ್,  ನ್ಯಾಯದ ನೆರಳು ಅರಿವಿನೆಡೆಗೆ ಕೃತಿಯ ಮುಖಪುಟ ವಿನ್ಯಾಸಗಾರ ಪ್ರಸನ್ನ ರೈ ಎಸ್ ಮತ್ತು ಮುದ್ರಣಗಾರ ಭರತ್ ಪ್ರಿಂಟರ್ಸ್ ಮಾಲಕ ತಿಮ್ಮಪ್ಪ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಸರ್ವೋಚ್ಚ ನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿ,  ದ.ಕ.ಜಿಲ್ಲೆಯ ನ್ಯಾಯಾಂಗ ವ್ಯವಸ್ಥೇಯಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತಿವೆ ಎಂದರು. ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್. ನಗರೇಶ್, ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ ಶುಭ ಹಾರೈಸಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಕೋಶಾಧಿಕಾರಿ ದಿವ್ಯರಾಜ್ ಹೆಗ್ಡೆ, ಜೊತೆಕಾರ್ಯದರ್ಶಿ ಮಮತಾ ಸುವರ್ಣ, ಪುತ್ತೂರು 5ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಧೀಶ ಶಿವಣ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್, ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶೆ ಲತಾ ದೇವಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ.ಪ್ರಕಾಶ್, ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ನ್ಯಾಯಾಧೀಶ ಕಿಶನ್ ಮಡಲಗಿ, ಹಿರಿಯ ನ್ಯಾಯವಾದಿ ಎನ್ ಸುಬ್ರಹ್ಮಣ್ಯಂ ಕೊಳತ್ತಾಯ ಮತ್ತಿತರರು ಉಪಸ್ಥಿತರಿದ್ದರು. 

ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು ಸ್ವಾಗತಿಸಿದರು. ರಾಜ್ಯ ವಕೀಲರ ಪರಿಷತ್ ಸದಸ್ಯ ಮಹೇಶ್ ಕಜೆ ವಂದಿಸಿದರು. ನ್ಯಾಯವಾದಿಗಳಾದ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಪ್ರವೀಣ್ ಬಂಬಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News