ಮಹಾರಾಷ್ಟ್ರ: ತೃತೀಯಲಿಂಗಿ ಕಲ್ಯಾಣ ಮಂಡಳಿ ಸ್ಥಾಪನೆ

Update: 2019-02-23 17:51 GMT

ಮುಂಬೈ,ಫೆ.23:ಸಮುದಾಯಕ್ಕೆ ವಿಧ್ಯುಕ್ತ ಶಿಕ್ಷಣ, ಉದ್ಯೋಗಾವಕಾಶಗಳು, ಆರೋಗ್ಯ ಕಾರ್ಯಕ್ರಮಗಳ ಆಯೋಜನೆ ಮತ್ತು ಕಾನೂನು ನೆರವು ಒದಗಿಸಲು ಮಹಾರಾಷ್ಟ್ರ ಸರಕಾರವು ತೃತೀಯಲಿಂಗಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ.

ತೃತೀಯ ಲಿಂಗಿಗಳನ್ನು ಸಮಾಜದಲ್ಲಿ ಕಡೆಗಣಿಸಲಾಗಿದೆ ಮತ್ತು ಈ ಸಮುದಾಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ತಪ್ಪು ಭಾವನೆಗಳಿವೆ. ಹೀಗಾಗಿ ಅವರು ತಾರತಮ್ಯಕ್ಕೊಳಗಾಗಿದ್ದಾರೆ. ಇದರಿಂದಾಗಿ ಈ ಸಮುದಾಯವು ಅಭಿವೃದ್ಧಿಯಿಂದ ವಂಚಿತವಾಗಿದೆ. ರಾಜ್ಯ ಸರಕಾರವು ಅವರ ಪೋಷಕತ್ವವನ್ನು ವಹಿಸಿಕೊಂಡಿದೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸಲಿದೆ ಎಂದು ರಾಜ್ಯದ ಸಾಮಾಜಿಕ ನ್ಯಾಯ ಸಚಿವ ರಾಜಕುಮಾರ ಬಡೋಲೆ ಅವರು ಹೇಳಿದರು.

ಮಂಡಳಿಯು ತೃತೀಯ ಲಿಂಗಿಗಳಿಗೆ ಸಮುದಾಯ ಗುರುತಿನ ಚೀಟಿಗಳನ್ನು ಒದಗಿಸಲಿದ್ದು,ಇದು ಅವರು ಶಿಕ್ಷಣ ಪಡೆಯಲು ನೆರವಾಗಲಿದೆ ಮತ್ತು 10ನೇ ತರಗತಿಯ ಪರೀಕ್ಷೆಗಾಗಿ ಅವರಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು. ಅರ್ಹ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಬಾಬಾಸಾಹೇಬ ಅಂಬೇಡ್ಕರ್ ಸ್ವಾಧಾರ ಯೋಜನೆಯಡಿ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗುವುದು. ಈ ಯೋಜನೆಯಡಿ ಅವರಿಗೆ ವಾರ್ಷಿಕ 48,000 ರೂ.ಗಳಿಂದ 60,000 ರೂ.ವರೆಗೆ ವಿದ್ಯಾರ್ಥಿ ವೇತನಗಳನ್ನು ನೀಡಲಾಗುವುದು. ವಿದ್ಯಾವಂತ ತೃತೀಯ ಲಿಂಗಿಗಳು ಉದ್ಯೋಗಗಳನ್ನು ಪಡೆಯಲು ನೆರವಾಗಲು ಮಂಡಳಿಯು ಅವರಿಗಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News