ಮಂಗಳೂರು: ಮಾ. 3ರಂದು "ನೆನಪು" ಕಾರ್ಯಕ್ರಮ

Update: 2019-02-23 18:00 GMT

ಬಂಟ್ವಾಳ, ಫೆ. 23: ಬೆಂಗಳೂರಿನ ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆ ವತಿಯಿಂದ ಅವಿಭಜಿತ ದ.ಕ. ಜಿಲ್ಲೆಯ ಚೇತನಗಳಾದ ದಿ.ಕುರ್ನಾಡು (ಪುಲ್ಲು) ರಾಮಯ್ಯ ನಾಯ್ಕ್ ಮತ್ತು ದಿ.ಮಹಿಮ್ ಕುಮಾರ್ ಹೆಗ್ಡೆ ಅವರ "ನೆನಪು" ಕಾರ್ಯಕ್ರಮ ಮಾ. 3ರಂದು ಬೆಳಿಗ್ಗೆ 10ಕ್ಕೆ ಮಂಗಳೂರಿನ ಪುರಭವನ ದಲ್ಲಿ ಆಯೋಜಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ತಿಳಿಸಿದ್ದಾರೆ.

ಅವರು ಶನಿವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರವರು ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿವಂಗತರಿಬ್ಬರನ್ನು ನೆನಪಿಸಲಿದ್ದಾರೆ. ದಿ.ರಾಮಯ್ಯ ನಾಯ್ಕ್ ಮತ್ತು ದಿ.ಮಹಿಮ್ ಕುಮಾರ್ ಹೆಗ್ಡೆ ಅವರ ಜೀವನ ಆದರ್ಶ ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವೇದಿಕೆಯ ಸಂಸ್ಥಾಪಕ ಬಂಟ್ವಾಳ ತಾಲೂಕಿನ ಬಡಾಜೆ ರವಿಶಂಕರ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷರಾಗಿರುವ ಮಹಾಥಮಗಾಂಧಿ ಶಾಂತಿ- ಸೌಹಾರ್ದ ವೇದಿಕೆಯು ರಾಜಕೀಯರಹಿತವಾದ ಸಂಸ್ಥೆಯಾಗಿದೆ. ವೇದಿಕೆಯ ವತಿಯಿಂದ ಈಗಾಗಲೇ ಹಲವಾರು ಹೋರಾಟ, ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ರಾಜಕೀಯ ಚೇತನಗಳಾಗಿದ್ದ ದಿವಂಗತರಾದ ಕುರ್ನಾಡು ರಾಮಯ್ಯ ನಾಯ್ಕ್ ಹಾಗೂ ಮಹಿಮ್ ಕುಮಾರ್ ಹೆಗ್ಡೆ ಅವರನ್ನು ನೆನಪಿಸುವ ಕಾರ್ಯಕ್ರಮವನ್ನು ಅವರ ಶುಷ್ಯ ಮತ್ತು ಅಭಿಮಾನಿಗಳ ಸೇರಿ ವೇದಿಕೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ವೇದಿಕೆಯ ಪ್ರಮುಖ ಸತೀಶ್ ಭಂಡಾರಿ ಮಾತನಾಡಿ, ದಿ. ರಾಮಯ್ಯ ನಾಯ್ಕ್ ದ.ಕ.ಜಿಲ್ಲೆಯ ಸಮಾಜ ಸೇವಾರತ್ನರಾಗಿದ್ದರು. ಬ್ಯಾಂಕ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಕೃಷಿ ಕ್ಷೇತ್ರದಲ್ಲಿ ತೊಡಗಿಸಿ 1980ರಲ್ಲಿ ತಮ್ಮ ಸಕ್ರೀಯ ರಾಜಕೀಯ ಜೀವನ ಆರಂಭಿಸಿದ್ದರು. ಎಲ್ಲಾ ವರ್ಗದ ಜನರ ಪ್ರೀತಿಗೂ ಪಾತ್ರರಾಗಿದ್ದು, 1989,1994ರಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲನ್ನಭವಿಸಿದ್ದರು. ಹಾಗೆಯೇ ಉಡುಪಿ ಜಿಲ್ಲೆಯ ಸಜ್ಜನ ರಾಜಕಾರಣ Âದಿ.ಮಹೀಮ್ ಕುಮಾರ್ ಹೆಗ್ಡೆ ಅವರು ಹಿರಿಯಡ್ಕ ಪರಿಸರದಲ್ಲಿ ಜನಮನ್ನಣೆ ಪಡೆದವರು. ಹಿರೇಬೆಟ್ಟು-ಅತ್ರಾಡಿ ಪಂಚಾಯತ್ ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದಲ್ಲದೆ, ಜನತಾದಳ ಪಕ್ಷದಲ್ಲಿ ಹಲವಾರು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಶಿಕ್ಷಣ,ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡವರಾಗಿದ್ದರು ಎಂದರು.

ಇವರಿಬ್ಬರ ನೆನಪನ್ನು ಈ ಹಿಂದೆಯೇ ಮಾಡಬೇಕಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿಲ್ಲ. ಇದೀಗ ಪಕ್ಷಾತೀತವಾಗಿ ಅವರ ಅಭಿಮಾನಿಗಳು, ಶಿಷ್ಯವರ್ಗ ಸೇರಿಕೊಂಡು ವೇದಿಯಡಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ಪುಪ್ಪರಾಜ್ ಶೆಟ್ಟಿ, ಭಕ್ತಕುಮಾರ್, ಹರಿಪ್ರಸಾದ್, ಬಸಂತ ಕುಮಾರ್, ಕೇಶವ ನಾಯ್ಕ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News