ಮೂಡುಬಿದಿರೆ: ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು- ಯು.ಟಿ.ಖಾದರ್

Update: 2019-02-23 18:15 GMT

ಮೂಡುಬಿದಿರೆ, ಫೆ. 23:  ಮಾ .1ರಂದು ಮೂಡುಬಿದಿರೆ ತಾಲೂಕು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಅವರಿಂದ ಉದ್ಘಾಟನೆಗೊಳ್ಳಲಿದ್ದು  ಮಿನಿ ವಿಧಾನಸೌಧ ನಿರ್ಮಾಣಕ್ಕೆ ರೂ. 10 ಕೋಟಿ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.

ಅವರು ಶನಿವಾರ ಸಂಜೆ ಮೂಡುಬಿದಿರೆ ಸಮಾಜಮಂದಿರದಲ್ಲಿ  ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಅಕ್ರಮ ಸಕ್ರಮದಲ್ಲಿ  ಬಡವರು ಹಲವು ವರ್ಷಗಳಿಂದ ಹೊಂದಿರುವ ಜಾಗದಲ್ಲಿ  ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಲವೆಡೆ ಭ್ರಷ್ಟಾಚಾರ ನಡೆಯುತ್ತಿದೆ, ಉಳ್ಳವರ ಅಕ್ರಮ ಸಕ್ರಮದ ಬಗ್ಗೆ ಯಾವುದೇ ಕ್ರಮ ಜರಗಿಸದ ಅಧಿಕಾರಿಗಳು ಬಡವರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ದೂರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ  ಮಾಜಿ ಸಚಿವ ಕೆ. ಅಭಯಚಂದ್ರ ಅವರೂ ದನಿಗೂಡಿಸಿ `ಹಾಗೆ ಮಾಡಬೇಡಿ' ಎಂದರು.  ಈ ಹಂತದಲ್ಲಿ  ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

ಮೂಡುಬಿದಿರೆ ಕೊಡಂಗಲ್ಲಿನಲ್ಲಿ ಬಡವರಿಗಾಗಿ ನಿರ್ಮಾಣವಾಗಲಿರುವ ವಸತಿ ಸಮುಚ್ಛಯದಲ್ಲಿ ತಲಾ 368 ಚದರಡಿಯ ಅವಕಾಶ ಮಾತ್ರ ಇದೆ; ಇದನ್ನು ಕನಿಷ್ಟ 600 ಅಡಿಗೇರಿಸಬೇಕು ಎಂದು ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಪಿ.ಕೆ. ಥಾಮಸ್ ವಿನಂತಿಸಿದಾಗ, ಸಚಿವರು ` ಬಡವರಿಗೆ ಅಷ್ಟು ಸಾಕು, ಅವರಿಗೆ ಮಾತ್ರ ಸಬ್ಸಿಡಿಯ ವ್ಯವಸ್ಥೆ ಇದೆ. ಆ ನಿಯಮ ಬದಲಾಯಿಸಲಾಗದು. ನೀವು ದೊಡ್ಡದು ಕಟ್ಟಿ ಇಡ್ತೀರಿ ಎಂದಾದರೆ ಅದನ್ನು ಪಡೆಯುವವರಿಗೆ ಸಬ್ಸಿಡಿಗೆ ಅವಕಾಶ ಇಲ್ಲ ' ಎಂದು ಸ್ಪಷ್ಟಪಡಿಸಿದರು.

ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ  ಉಳ್ಳವರ ಹಡಿಲು ಭೂಮಿಯನ್ನು  ಲೀಸ್‍ಗೆ ಪಡೆದು  ಕೃಷಿ ನಡೆಸುತ್ತ ಬಂದಿರುವ ಸಾಧಕ ಪುತ್ತಿಗೆ ಜನಾರ್ದನ ಗೌಡ ಅವರು ತೋಡಿನ ಮಧ್ಯೆ ಇರುವ ಪರಂಬೋಕು ಬಾವಿಯಿಂದ ನೀರು ಸೆಳೆಯುವುದಕ್ಕೆ  ಅಡ್ಡಿ ಪಡಿಸಲಾಗಿರುವ ಬಗ್ಗೆ  ಸಚಿವರ ಗಮನ ಸೆಳೆದಾಗ  ಈ ಬಗ್ಗೆ ತಹಶೀಲ್ದಾರರು ಸೂಕ್ತ ಕ್ರಮ ಜರಗಿಸಿ ಗೌಡ ಅವರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.

ಜಾತಿ -ಆದಾಯ ದೃಢ ಪತ್ರಗಳಿಗಾಗಿ ಅಟಲ್‍ಜೀ ಜನಸ್ನೇಹಿ ಅಥವಾ ಗ್ರಾಮಾಂತರದಲ್ಲಿ  ಬಾಪೂಜಿ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿ, ಬಳಿಕ ಪರಿಶೀಲನೆಗೆ ಆಯಾ ಗ್ರಾಮ ಕರಣಿಕರಿಗೆ ಕಳುಹಿಸಿ ಕೊಡಬೇಕು. ನೇರವಾಗಿ ಗ್ರಾಮಕರಣಿಕರಿಗೆ ಕೊಡುವ ಕ್ರಮ ನಿಲ್ಲಿಸದಿದ್ದರೆ ಜನರಿಗೆ ತೊಂದರೆ ಆಗುತ್ತದೆ ಎಂಬ ದೂರಿಗೆ ಸ್ಪಂದಿಸಿದ ಸಚಿವರು ತಹಶೀಲ್ದಾರರಿಗೆ ಸೂಚಿಸಿದರು.

ಉಚಿತ ವಿದ್ಯುತ್ ಸೌಲಭ್ಯದಿಂದಾಗಿ ಸ್ಪ್ರಿಂಕ್ಲರ್ ಬಳಸುವವರು ಬೇಕಾಬಿಟ್ಟಿಯಾಗಿ ನೀರು ಬಿಡುತ್ತಿರುವುದರಿಂದ ಅಂತರ್ಜಲಮಟ್ಟ ಕುಸಿಯುವ ಭೀತಿ ವ್ಯಕ್ತಪಡಿಸಿದ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ  ಪಿ. ಕೆ. ಥಾಮಸ್ ಅವರು `ಹನಿ ನೀರಾವರಿಗೇ ಹೆಚ್ಚು ಒತ್ತು ಕೊಡಬೇಕು' ಎಂದು ಆಗ್ರಹಿಸಿದರು ಹಾಗೂ ಈ ಬಗ್ಗೆ   ರೈತರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ' ಎಂದು ವಿನಂತಿಸಿದರು. ಈ ಬಗ್ಗೆ  ಸಚಿವರು ಸೂಕ್ತ ಕ್ರಮ ಜರಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಜಿಎಸ್‍ಟಿ ಶೇ. 135 ಗುರಿ ಸಾಧನೆ:

ಮೂಡುಬಿದಿರೆ ತಾಲೂಕಿನಲ್ಲಿ   ಕಳೆದ ಜನವರಿ ಮುಕ್ತಾಯಕ್ಕೆ ರೂ. 20.5 ಕೋಟಿಯಷ್ಟು  ಮೊತ್ತದ ಜಿಎಸ್‍ಟಿ ಸಂಗ್ರಹವಾಗಿದ್ದು ಇದರಿಂದ 135 ಶೇ. ಗುರಿ ಸಾಧಿಸಿದಂತಾಗಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ತಿಳಿಸಿದರು. ಸರ್ಕಲ್ ಇನ್ಸ್‍ಫೆಕ್ಟರ್ ರಾಮಚಂದ್ರ ನಾಯಕ್ ಅವರು `ಮೂಡುಬಿದಿರೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ   ಕಮಿಷನರೇಟ್ ವ್ಯಾಪ್ತಿಯಲ್ಲಿ  ಮೊದಲ ಸ್ಥಾನದಲ್ಲಿದ್ದು  ಟ್ರಾಫಿಕ್ ಕ್ರೈಮ್ಸ್‍ನಲ್ಲಿ  ದ್ವಿತೀಯ ಸ್ಥಾನದಲ್ಲಿದೆ; ಇಲ್ಲಿಗೆ ಟ್ರಾಫಿಕ್ ಪೆÇಲೀಸ್ ಸ್ಟೇಶನ್ ಸ್ಥಾಪನೆಯ ಬಗ್ಗೆ  ಪ್ರಸ್ತಾವನೆ ಹೋಗಿದೆ, ಇನ್ನೂ  ಹಾಗೇ ಉಳಿದುಕೊಂಡಿದೆ' ಎಂದು ಸಚಿವರ ಗಮನ ಸೆಳೆದಾಗ, ಈ ಬಗ್ಗೆ  ಕೂಡಲೇ ಕ್ರಮ ಜರಗಿಸುವುದಾಗಿ ಖಾದರ್ ತಿಳಿಸಿದರು. 

ಪುರಸಭಾ ಮುಖ್ಯಾಧಿಕಾರಿ ಇಂದು,  ಜಿ.ಪಂ. ಸದಸ್ಯರಾದ ಸುಚರಿತ ಶೆಟ್ಟಿ, ಕೆ. ಪಿ.ಸುಜಾತಾ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು , ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನ್ಹಾ, ತಾ.ಪಂ.ಸದಸ್ಯರಾದ ಪ್ರಕಾಶ್ ಗೌಡ, ಪ್ರಶಾಂತ ಅಮೀನ್,  ಎಪಿಎಂಸಿ ಅಧ್ಯಕ್ಷ  ಪ್ರವೀಣ್ ಕುಮಾರ್ ಜೈನ್ ಮೊದಲಾದವರಿದ್ದರು.

ತಹಶೀಲ್ದಾರ್ ಸುದರ್ಶನ ಕೆ. ಸಹಿತ  ವಿವಿಧ ಇಲಾಖಾ„ಕಾರಿಗಳು ಪಾಲ್ಗೊಂಡಿದ್ದರು. ಉಪತಹಶೀಲ್ದಾರ್ ನಿತ್ಯಾನಂದ ದಾಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅನುಪಸ್ಥಿತಿ ಗಮನ ಸೆಳೆದರೆ ಮಾಜಿ ಸಚಿವ ಕೆ. ಅಭಯಚಂದ್ರ ವೇದಿಕೆಯಲ್ಲಿ ಸಚಿವರೊಂದಿಗೆ ಸಕ್ರಿಯರಾಗಿ ತೊಡಗಿಕೊಂಡದ್ದು ವಿಶೇಷವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News