×
Ad

ಉಡುಪಿಯಲ್ಲಿ ಉದ್ಯೋಗಾಕಾಂಕ್ಷಿಳಿಗೆ ಪೂರಕ ಸೌಲಭ್ಯ: ಕರಂದ್ಲಾಜೆ

Update: 2019-02-24 16:03 IST

ಕೋಟ, ಫೆ.24: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಂತೆ ಕೇಂದ್ರ ಸರಕಾರದಿಂದ ದೊರೆಯಬಹುದಾದ ಎಲ್ಲಾ ರೀತಿಯ ಸೌಲ್ಯಗಳನ್ನು ಉಡುಪಿ ಜಿಲ್ಲೆಗೆ ಒದಗಿಸಲಾಗಿದ್ದು, ಯುವಜನತೆ ಉದ್ಯೋಗ ಪಡೆಯಲು ಎಲ್ಲಾ ರೀತಿಯ ಪೂರಕ ವಾತಾವರಣ ಜಿಲ್ಲೆಯಲ್ಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲಾಭಿವೃಧ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ‘ಭರವಸೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಟಿಟಿಸಿ ತರಬೇತಿ ಕೇಂದ್ರವನ್ನು ಉಪ್ಪೂರಿನಲ್ಲಿ ನಿರ್ಮಿಸಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಉದೋಗ ದೊರೆಯುವುದು ಖಚಿತ. ಮಣಿಪಾಲದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಕೌಶಲ್ಯ ಕೇಂದ್ರವನ್ನು ತೆರೆಯ ಲಾಗಿದೆ. ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ರಾಮಕೃಷ್ಣ ಹೆಗಡೆ ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಜೆಮ್ಸ್ ಅಂಡ್ ಜ್ಯೂಯಲ್ಸ್ ತರಬೇತಿ ಕೇಂದ್ರ ಕೂಡ ಆರಂಭಗೊಂಡಿದೆ ಎಂದರು.

ಉದ್ಯೋಗ ಪಡೆಯಲು ಸಂದರ್ಶನ ಎದುರಿಸುವ ಕುರಿತು ಅಗತ್ಯ ಕೌಶಲ್ಯ ಬೆಳೆಸಿಕೊಳ್ಳಬೇಕು. ಅನುಭವದಿಂದ ಕೌಶಲ್ಯ ಬರಲಿದ್ದು ಮೊದಲ ಬಾರಿ ಸಂದರ್ಶನದಲ್ಲಿ ವಿಫಲರಾದರೆ ನಿರಾಸೆಗೊಳ್ಳಬಾರದು. ಕರಾವಳಿ ಭಾಗದ ಯುವಜನತೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ, ಪ್ರತಿಭೆ, ಕೆಲಸದಲ್ಲಿ ಶ್ರದ್ದೆ, ಪ್ರಾಮಾ ಣಿಕತೆ ಇರುವುದರಿಂದ ಕಂಪೆನಿಗಳು ಹೆಚ್ಚಿನ ಉದ್ಯೋಗಗಳನ್ನಿ ಇವರಿಗೆ ನೀಡಬೇಕು ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಯುವ ಜನತೆಯ ಗುರಿ ದೊಡ್ಡದಾಗಿರಬೇಕು. ಆಗ ಅದನ್ನು ಸಾಧಿಸುವ ಪ್ರಯತ್ನ ಕೂಡ ದೊಡ್ಡದಾಗಿರುತ್ತದೆ. ಇದರಿಂದ ದೊರೆಯುವ ಪ್ರತಿಫಲ ಸಹ ದೊಡ್ಡದಾಗಿರು ತ್ತದೆ. ಉದ್ಯೋಗ ಮೇಳದಲ್ಲಿ ಉದ್ಯೋಗ ನೀಡುವ ಕಂಪೆನಗಳು ಉದ್ಯೋಗ ದೊಂದಿಗೆ ತಮ್ಮ ಸಿಬ್ಬಂದಿಗಳ ಯೋಗಕ್ಷೆಮವನ್ನೂ ನೋಡಿಕೊಳ್ಳಬೇಕು. ಶಿಕ್ಷಣ ಹಬ್ ಆಗಿರುವ ಉಡುಪಿಯು ಉದ್ಯೋಗ ಒದಗಿಸುವ ಹಬ್ ಕೂಡ ಆಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ 75ಕ್ಕೂ ಅಧಿಕ ಕಂಪೆನಿಗಳು ಮತ್ತು ಸುಮಾರು 3500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. ಇದರಲ್ಲಿ ಸುಮಾರು 800 ರಿಂದ 1000 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಭಾಸ್ಕರ್ ಅಮೀನ್, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವುಡ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಕುಂದರ್ ಉಪಸ್ಥಿತರಿದ್ದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News