ಚುನಾವಣಾ ಅಕ್ರಮ-ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ‘ಸಿಟಿಜನ್ ವಿಜಿಲ್’ ಆ್ಯಪ್ ಮೂಲಕ ದೂರಿಗೆ ಅವಕಾಶ: ದ.ಕ. ಡಿಸಿ
ಮಂಗಳೂರು, ಫೆ.24: ಚುನಾವಣೆಯ ಸಂದರ್ಭ ಹಣ, ಹೆಂಡ, ಸೀರೆ ಇತ್ಯಾದಿ ಹಂಚಿಕೆಯಲ್ಲದೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುವುದನ್ನು ಫೋಟೋ ಅಥವಾ ವೀಡಿಯೋ ಮೂಲಕ ಸೆರೆ ಹಿಡಿದು ‘ಸಿಟಿಜನ್ ವಿಜಿಲ್’ ಆ್ಯಪ್ ಮೂಲಕ ದೂರು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ರವಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ‘ಸಿ ವಿಜಿಲ್’ ಎಂಬ ಜನಸ್ನೇಹಿ ಆ್ಯಪ್‌ನ್ನು ಜಾರಿಗೆ ತಂದಿದೆ. ಚುನಾವಣೆಯ ಸಂದರ್ಭ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಪ್ರಸಂಗ ಅಥವಾ ಪ್ರಕರಣ ಕಂಡು ಬಂದ ತಕ್ಷಣ ಸಾರ್ವಜನಿಕರು ಫೋಟೋ ಅಥವಾ ವೀಡಿಯೋ ಮಾಡಿ ಆ್ಯಪ್ ಮೂಲಕ ನೇರ ದೂರು ಸಲ್ಲಿಸಬಹುದು. ದೂರು ಸಲ್ಲಿಸಿದ ತಕ್ಷಣ ತಪಾಸಣಾ ತಂಡ ಸೃಳಕ್ಕೆ ಹಾಜರಾಗಿ ಕಾರ್ಯಪ್ರವೃತ್ತರಾಗಲಿದೆ. ಅಲ್ಲದೆ ದೂರು ನೀಡಿದ 100 ನಿಮಿಷದೊಳಗೆ ಈ ಬಗ್ಗೆ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆಯೂ ಮಾಹಿತಿ ರವಾನಿಸಲಾಗುವುದು ಎಂದರು.
ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ಮೂಲಕ ತಮ್ಮ ಮೊಬೈಲ್‌ಗೆ ‘ಸಿ ವಿಜಿಲ್’ ಅಂದರೆ ‘ಸಿಟಿಜನ್ ವಿಜಿಲ್’ ಆ್ಯಪ್ ಡೌನ್ ಮಾಡಿಕೊಳ್ಳಬಹುದು. ಫೋಟೋ-ವೀಡಿಯೋ ರವಾನೆಗೆ ಮುನ್ನ ಲಾಗಿನ್ ಆಗಲು ಮೊಬೈಲ್ ನಂಬರ್ ಕೇಳುತ್ತದೆ. ಅಲ್ಲದೆ ಒಟಿಪಿ ನಂಬರನ್ನೂ ನೀಡುತ್ತದೆ. ದೂರುದಾರರು ತನ್ನ ಹೆಸರು, ವಿಳಾಸವನ್ನು ನೀಡಬಹುದು ಅಥವಾ ನೀಡದೇ ಇರಬಹುದು. ಅನಾಮಧೇಯ ಆದರೂ ಕೂಡ ಜಿಪಿಎಸ್ ಆಧಾರಿತ ಆ್ಯಪ್ ಆದ ಕಾರಣ ಸುಳ್ಳು ದೂರುಗಳನ್ನು ಸಲ್ಲಿಸಲು ಸಾಧ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಆ್ಯಪ್ ಬಗ್ಗೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿ-ಸಿಬ್ಬಂದಿ ವರ್ಗ ಮತ್ತು ಪೊಲೀಸ್ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಫೋಟೋ ಮತ್ತು ವೀಡಿಯೋ ತಕ್ಷಣಕ್ಕೆ ಲಭಿಸಲಿರುವುದರಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾರೇ ಆದರೂ ಮತದಾರರ ಮೇಲೆ ಆಮಿಷವೊಡ್ಡಿದರೆ, ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.