×
Ad

ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರತ ಮಾತೆಯ ಪ್ರಸಾದ: ಕೇಂದ್ರ ಸಚಿವ ಪರಷೋತ್ತಮ ರೂಪಾಲಿ

Update: 2019-02-24 18:43 IST

ಪುತ್ತೂರು, ಪೆ. 24: ಕೇಂದ್ರ ಸರಕಾರವು ಈ ದೇಶದ ಅನ್ನದಾತನಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಭಾರತ ಮಾತೆಯ ಪ್ರಸಾದವಾಗಿ ಹಣ ನೀಡಿ ಸನ್ಮಾನ ಮಾಡುತ್ತಿದೆ. ದೇಶದ ಚರಿತ್ರೆಯಲ್ಲಿಯೇ ಸರಕಾರದ ಖಜಾನೆಯಿಂದ ರೈತನ ಖಜಾನೆಗೆ ನೇರ ಹಣ ತುಂಬಿಸುವ ಯೋಜನೆಯನ್ನು ಜಾರಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಕೃಷಿ ಕ್ಷೇತ್ರದ ಪುನರುತ್ಥಾನಕ್ಕೆ ನಾಂದಿ ಹಾಡಿದ್ದಾರೆ. ಖಜಾನೆಯಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತನ ಖಜಾನೆಗೆ ನೇರ ಹಣವನ್ನು ತುಂಬುತ್ತಿದ್ದಾರೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪರಷೋತ್ತಮ ರೂಪಾಲ ಹೇಳಿದರು. 

ಅವರು ಪುತ್ತೂರಿನ  ರಾಷ್ಟ್ರೀಯ ಗೇರುಸಂಶೋಧನಾ ಕೇಂದ್ರ(ಡಿಸಿಆರ್)ದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಉದ್ಘಾಟಿಸಿ ಮಾತನಾಡಿದರು. 

ದೇಶದಲ್ಲಿ 2ಎಕರೆಯಷ್ಟು ಕೃಷಿ ಭೂಮಿಯನ್ನು ಹೊಂದಿರುವ ರೈತರು ಇದರ ಫಲಾನುಭವಿಗಳಾಗಲಿದ್ದಾರೆ. ಭಾರತದಲ್ಲಿ ಕೇವಲ ಕೈಗಾರಿಕಾ ಕ್ರಾಂತಿ ಮಾತ್ರವಲ್ಲ ಕೃಷಿ ಕ್ರಾಂತಿ ಕೂಡಾ ಅಗತ್ಯವಿದೆ ಎಂಬ ಚಿಂತನೆಯನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದಾರೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರೈತನಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ಪ್ರಧಾನಿ ಮೋದಿ ಚಿಂತನೆ ನಡೆಸಿದ್ದಾರೆ. ಕೃಷಿ ವಲಯಕ್ಕೆ ಆದ್ಯತೆ ನೀಡಲು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ರೂ. 75ಕೋಟಿಯನ್ನು ಈ ಯೋಜನೆಗೆ ಮೀಸಲಿಟ್ಟಿದ್ದಾರೆ ಎಂದರು. 

ಶಾಸಕ ಸಂಜೀವ ಮಠಂದೂರು ಮಾತನಾಡಿ  ದೇಶದಲ್ಲಿ ಜಾರಿಯಾಗಿರುವ ಕಿಸಾನ್ ಸಮ್ಮಾನ್ ನಿಧಿಯನ್ನು ಪಡೆಯಲು 15ಸಾವಿರ ರೈತರು ನೋಂದಣಿ ಮಾಡಿದ್ದಾರೆ. 1800 ರೈತರು ದಾಖಲೆ ಸಲ್ಲಿಸಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ಉಪಸ್ಥಿತರಿದ್ದರು. 

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಉದ್ಘಾಟಿಸಿರುವುದು ಪುತ್ತೂರಿನ ಕಾರ್ಯಕ್ರಮದಲ್ಲಿ ಎಲ್‍ಇಡಿ ಪರದೆಯ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ನಡೆಯಿತು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯೊಂದಿಗೆ ಸಂವಾದ ನಡೆಸಲು ಅವಕಾಶ ಪಡೆದ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ್ ಭಟ್ ಪ್ರಧಾನಿಯವರು ಕೃಷಿ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಅಭಿನಂದಿಸಿದರು ಮತ್ತು ಕಿಸಾನ್ ಸಮ್ಮಾನ್ ನಿಧಿ ರೈತರನ್ನು ಪ್ರೋತ್ಸಾಹಿಸುವ ಸ್ವಾಭಿಮಾನಿ ಕ್ರಮ ಎಂದು ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಮತ್ತಿತರರು ಉಪಸ್ಥಿತರಿದದ್ದರು. 

ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ. ಗಂಗಾಧರ ನಾಯಕ್ ಸ್ವಾಗತಿಸಿದರು. ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News