ಲೋಕಸಭಾ ಚುನಾವಣೆ: ಮೂರ್ನಾಲ್ಕು ದಿನದಲ್ಲಿ ಸೀಟು ಹಂಚಿಕೆ ಅಂತಿಮ- ದಿನೇಶ್ ಗುಂಡೂರಾವ್
ಮಂಗಳೂರು, ಫೆ. 24: ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯದ ಸೀಟು ಹಂಚಿಕೆ ಪ್ರಕ್ರಿಯೆಯು ಮೂರ್ನಾಲ್ಕು ದಿನಗಳಲ್ಲಿ ಅಂತಿಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸೋಮವಾರ(ಫೆ.25) ಸಭೆ ಕರೆಯಲಾಗುವುದು. ಸಭೆಯಲ್ಲಿ ರೇವಣ್ಣ, ವಿಶ್ವನಾಥ್, ಪರಮೇಶ್ವರ್ ಮತ್ತು ತಾನು ಸೇರಿ ಮೂರ್ನಾಲ್ಕು ದಿನಗಳಲ್ಲಿ ಸೀಟು ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.
ಕುಮಾರಸ್ವಾಮಿ ಕಾಂಗ್ರೆಸ್ ಮೈತ್ರಿಯಿಂದ ಹೊರಬರಲು ಕಾಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಹೇಳಿಕೆಗೆ ಬೆಲೆ ಕೊಡಬೇಕಿಲ್ಲ. ಈ ಸಲ ಕೇಂದ್ರದಲ್ಲಿ ಸರಕಾರ ಉರುಳಲಿದೆ ಎಂಬ ಭಯ ಅವರಿಗೆ ಸೃಷ್ಟಿಯಾಗಿದೆ. ಹಾಗಾಗಿಯೇ ಅವರು ಹುಚ್ಚುಹುಚ್ಚಾಗಿ ಮಾತನಾಡುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.
ಬಿಎಸ್‌ವೈ ರಾಜೀನಾಮೆಗೆ ಆಗ್ರಹ: ಬಿ.ಎಸ್.ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಶಾಸಕರನ್ನು ಖರೀದಿ ಮಾಡುವುದು ಬಹಿರಂಗವಾಗಿದೆ. ಧ್ವನಿ ತಮ್ಮದೇ ಎಂದು ಒಪ್ಪಿದ್ದಾರೆ. ಇಷ್ಟೆಲ್ಲ ಮಾನಗೆಟ್ಟ ರಾಜಕಾರಣ ಮಾಡಿದ ಬಳಿಕ ಅವರು ಅಧ್ಯಕ್ಷರಾಗಿ ಇರಬೇಕಾ? ಅವರನ್ನು ರಾಷ್ಟ್ರೀಯ ನಾಯಕರು ಯಾಕೆ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದರು. ಪ್ರಕಾಶ್ ರೈ ಅವರು ನಮ್ಮ ಪಕ್ಷದಲ್ಲಿ ಇಲ್ಲ. ಪಕ್ಷ ಸೇರುವಂತೆ ಆಹ್ವಾನಿಸಿದ್ದೇವೆ. ಸೇರದಿದ್ದರೆ ನಾವೇನು ಮಾಡಬೇಕು? ಅದು ನಮ್ಮ ವಿಚಾರವಲ್ಲ, ಅವರ ವೈಯಕ್ತಿಕ ಎಂದರು.
‘ಸಾಧನೆ ಮಾಡದ ಸಂಸದ ಅನಂತ್ ಕುಮಾರ’
ದೇಶ ಆಳಬೇಕಾದರೆ ಭಾರತೀಯ ರಕ್ತ ಆಗಿರಬೇಕು, ಇಟಲಿಯ ರಕ್ತ ಅಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಪ್ರಕಾರ ಹೋದರೆ ದೇಶ ಆಳಬೇಕಾದರೆ ಬುಡಕಟ್ಟು ಜನಾಂಗದವರ ಮೂಲ ವಾರಸುದಾರರ ರಕ್ತ ಆಗಬೇಕು. ಎಲ್ಲರೂ ಬೇರೆ ಬೇರೆ ಕಡೆಯಿಂದಲೆ ಬಂದವರು. ಅನಂತ್ ಕುಮಾರ್ ಹೆಗಡೆಗೆ ಏನೂ ಗೊತ್ತಿಲ್ಲ. ಅವರದು ಕೇವಲ ಪ್ರಚಾರದ ಮಾತುಗಳು. ಯಾವುದೇ ಸಾಧನೆ ಮಾಡದ ಸಂಸದ ಇದ್ದರೆ ಅದು ಅನಂತ್ ಕುಮಾರ್ ಹೆಗಡೆ ಮಾತ್ರ. ಕಾರವಾರ ಕ್ಷೇತ್ರದಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಅವರು ಅದರ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.