ಯುವಜನತೆಗೆ ಯಶಸ್ವಿ ಉದ್ಯಮಿಗಳ ಮಾರ್ಗದರ್ಶನ ಅಗತ್ಯ: ಬಿಷಪ್ ಐಸಾಕ್ ಲೋಬೊ
ಉಡುಪಿ, ಫೆ. 24: ಉಡುಪಿ ಜಿಲ್ಲೆಯಲ್ಲಿ ಉದ್ಯಮಕ್ಕೆ ಸಾಕಷ್ಟು ಅವಕಾಶ ಗಳಿವೆ. ಅದಕ್ಕೆ ಬೇಕಾದ ಸಂಪನ್ಮೂಲಗಳು ಸಾಕಷ್ಟಿವೆ. ಆದರೆ ಸಮುದಾಯದ ಯುವಕರು ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಇಂದು ವಿದೇಶ ಗಳಲ್ಲಿನ ಬದಲಾದ ಪರಿಸ್ಥಿತಿಯಿಂದ ನಾವು ಹೊಸ ದಾರಿಯನ್ನು ಕಂಡುಕೊಳ್ಳ ಬೇಕು. ಈ ನಿಟ್ಟಿನಲ್ಲಿ ಹಿರಿಯ ಹಾಗೂ ಯಶಸ್ವಿ ಉದ್ಯಮಿಗಳ ಮಾರ್ಗದರ್ಶನ ಅಗತ್ಯವಾಗಿ ಬೇಕಾಗಿದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಹಾಗೂ ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ಜಂಟಿ ಆಶ್ರಯದಲ್ಲಿ ರವಿವಾರ ಉಡುಪಿ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ಆಯೋಜಿಸಲಾದ ಕ್ರೈಸ್ತ ಉದ್ಯಮಿ ಗಳ ಸಹಮಿಲನ ‘ಪ್ರೇರಣಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತ ನಾಡಿ, ಉದ್ಯಮದಲ್ಲಿ ತಾಳ್ಮೆ ಎಂಬುದು ಮುಖ್ಯ. ಆಗ ಮಾತ್ರ ಯಶಸ್ವಿ ಉದ್ಯಮಿ ಆಗಲು ಸಾಧ್ಯ. ಅದೇ ರೀತಿ ಉದ್ಯಮದಲ್ಲಿ ಸ್ಪಷ್ಟವಾದ ನೀತಿ, ಬದ್ಧತೆ ಮತ್ತು ಟೀಮ್ ವರ್ಕ್ ಅತಿ ಅಗತ್ಯ ಎಂದು ಹೇಳಿದರು.
ರಾಜ್ಯ ಸರಕಾರ ಉದ್ಯಮಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಯಾವುದೇ ಭದ್ರತೆ ಇಲ್ಲದೆ 10ಕೋಟಿ ರೂ. ಸಾಲಯೋಜನೆಯನ್ನು ಜಾರಿಗೆ ತಂದಿದೆ. ಸರಕಾರ ಕ್ರಿಶ್ಚಿಯನ್ ಅಭಿವೃದ್ದಿ ನಿಗಮವನ್ನು ಸ್ಥಾಪಿಸುವುದರ ಜೊತೆಗೆ 200 ಕೋಟಿ ರೂ. ಅನುದಾನ ನೀಡಿದೆ. ಇದರಿಂದ ಸಮುದಾಯದ ಉದ್ಯಮ, ಶಿಕ್ಷಣ ಹಾಗೂ ಕೃಷಿಗೆ ಬಹಳಷ್ಟು ಸಹಕಾರ ಆಗಲಿದೆ ಎಂದರು.
ಮಂಗಳೂರು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ದಿಕ್ಸೂಚಿ ಭಾಷಣ ಮಾಡಿದರು. ಉದ್ಯಮ ಕ್ಷೇತ್ರದ ಸಾಧಕರಾದ ಕಾರ್ಕಳದ ಜೋಯಲ್ ವಿವಿಯನ್ ಮಥಾಯಸ್‌ಗೆ ಪ್ರೇರಣಾ ಯುವ ಉದ್ಯಮಿ, ಕುಂದಾಪುರದ ಶರ್ಮಿಳಾ ಬುತೆಲ್ಲೊ ಪ್ರೇರಣಾ ಮಹಿಳಾ ಉದ್ಯಮಿ ಹಾಗೂ ಕಾರ್ಕಳದ ಜೋನ್ ಆರ್.ಡಿಸಿಲ್ಲ ಪ್ರೇರಣಾ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ವಹಿಸಿದ್ದರು. ಮಂಗಳೂರಿನ ಆದಾಯ ತೆರಿಗೆ ಅಧಿಕಾರಿ ನತಾಲಿಯ ಹೆಲೆನ್ ಲೋಬೊ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಐ.ಆರ್. ಫೆರ್ನಾಂಡಿಸ್, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಾಲ್ಟರ್ ಸಲ್ದಾನ, ಉಡುಪಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎ.ಇ.ಪಿ.ದುಕೋರಿಯಾ ಮುಖ್ಯ ಅತಿಥಿಗಳಾಗಿದ್ದರು.
ಚೇಂಬರ್‌ನ ಕಾರ್ಯದರ್ಶಿ ಡಾಲ್ಘಿ ಲೂವಿಸ್, ಕೆಥೋಲಿಕ್ ಸಭಾದ ಕಾರ್ಯದರ್ಶಿ ಮೆಕ್ಸಿಂ ಡಿಸೋಜ ಉಪಸ್ಥಿತರಿದ್ದರು. ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ಚೇಂಬರ್‌ನ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ವಂದಿಸಿದರು. ಬಳಿಕ ಶಂಕರಪುರದ ಅನಿಲ್ ಡೆಸಾ ಮತ್ತು ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.