ಕಡಬ: ನಿಯಂತ್ರಣ ತಪ್ಪಿದ ಕಾರು ಪಲ್ಟಿ; ಇಬ್ಬರಿಗೆ ಗಾಯ
Update: 2019-02-24 20:42 IST
ಕಡಬ, ಫೆ. 24. ಚಾಲಕನ ನಿಯಂತ್ರಣ ತಪ್ಪಿದ ಹೊಸ ಕಾರೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಸಮೀಪದ ದೇರಾಜೆ ಎಂಬಲ್ಲಿ ರವಿವಾರ ಸಂಭವಿಸಿದೆ.
ಹಾಸನ ಮೂಲದ ಯುವಕರು ಕುಕ್ಕೇ ಸುಬ್ರಹ್ಮಣ್ಯ ದರ್ಶನ ಮುಗಿಸಿ ಮಂಗಳೂರಿಗೆ ತೆರಳುತ್ತಿದ್ದಾಗ ಬಲ್ಯ ಸಮೀಪದ ದೇರಾಜೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಸುಬ್ರಹ್ಮಣ್ಯ ನಿವಾಸಿ, ಕಡಬದಲ್ಲಿ ಅಲ್ಯೂಮಿನಿಯಮ್ ಫ್ಯಾಬ್ರಿಕೇಶನ್ ಅಂಗಡಿ ಹೊಂದಿದ್ದ ಗಗನ್ ಹಾಗೂ ಹಾಸನ ಮೂಲದ ಶ್ರೀಕಾಂತ್ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.