ಬಾಲ್ಯದಲ್ಲೇ ಕೃಷಿ ಆಸಕ್ತಿಯಿದ್ದರೆ ಕೃಷಿಯಲ್ಲಿ ಬೆಳಯಲು ಸಾಧ್ಯ: ಪ್ರದೀಪ್ ಸುರಿ
ಪುತ್ತೂರು, ಫೆ. 24: ಬಾಲ್ಯದಲ್ಲೇ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವುದರಿಂದ ಕೃಷಿಯಲ್ಲಿ ಬೆಳವಣಿಗೆಯನ್ನು ತರಲು ಸಾದ್ಯ. ನಮ್ಮ ಮನೆಯಲ್ಲಿ ನಾವೇ ಸ್ವತಃ ತರಕಾರಿ ಬೆಳೆಯುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ವೃತ್ತಿ ಯಾವುದೇ ಇದ್ದರೂ ಕೃಷಿ ಆಸಕ್ತಿಯಾಗಿರಬೇಕು ಎಂದು ಪ್ರಗತಿಪರ ಕೃಷಿಕ ನಿವೃತ್ತ ಬ್ಯಾಂಕ್ ಉದ್ಯೋಗಿ ಪ್ರದೀಪ್ ಸುರಿ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಆವರಣದಲ್ಲಿ ಆಯೋಜನೆಗೊಂಡ ಕೃಷಿ ಯಂತ್ರ ಮೇಳ-2019 ಇದರ ಭಾನುವಾರದ ವಿಚಾರಗೋಷ್ಠಿಯಲ್ಲಿ `ನಮ್ಮ ಮನೆಗೆ ನಮ್ಮದೇ ತರಕಾರಿ' ಎಂಬ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ದೊರಕುವ ಕಡಿಮೆ ಜಾಗದಲ್ಲೂ ಸಾವಯವ ಗೊಬ್ಬರಗಳ ಮೂಲಕ ಆರೋಗ್ಯಕರ ತರಕಾರಿಯನ್ನು ಉತ್ಪಾದಿಸಲು ಸಾಧ್ಯ. ಸಾಧಾರಣವಾಗಿ ತರಕಾರಿಗಳನ್ನು ಬೆಳೆಸುವ ಸಂದರ್ಭದಲ್ಲಿ ಕೀಟ ಭಾದೆಯು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಈ ತೊಂದರೆಯಿಂದ ಪಾರಾಗಲು ಶೇಡ್ ನೆಟ್, ಕಹಿ ಬೇವಿನ ಎಣ್ಣೆ ಮತ್ತು ಹುಳಿ ಮಜ್ಜಿಗೆಯನ್ನು ಬಳಸಬಹುದು ಎಂದು ಸಲಹೆ ನೀಡಿದರು.
ಪಶುವೈದ್ಯ ರಘುರಾಮ್ ಹಾಸನಡ್ಕ ಬೊಮ್ಮೆಟ್ಟಿ ಮಾತನಾಡಿ, ರಾಸಾಯನಿಕ ಮಿಶ್ರಿತ ತರಕಾರಿಗಳನ್ನು ಹೋಲಿಸಿದರೆ ಸಾವಯವ ತರಕಾರಿಗಳಿಗೆ ಬಾಳ್ವಿಕೆ ಹೆಚ್ಚು. ಕೀಟ ಬಾಧೆಗಳು ಎಷ್ಟೆ ಇದ್ದರೂ ಅದಕ್ಕೆ ಸೂಕ್ತವಾದ ಪರಿಹಾರವು ಅಷ್ಟೆ ಇರುತ್ತವೆ. ಉತ್ತಮ ಫಸಲು ನೀಡುವ ತರಕಾರಿಗಳನ್ನು ಬೆಳೆಸಿ ಅದರ ಬೀಜವನ್ನು ನಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ಇಂದಿನ ಕೃಷಿಕರಿಗೆ ಇದೆ. ತರಕಾರಿಗಳನ್ನು ಬೆಳೆಸಲು ಮುಖ್ಯವಾಗಿ ಬೇಕಾಗಿರುವುದು ಶಾಖ ಮತ್ತು ತೇವಯುತ ಪರಿಸರ. ಅದೇ ರೀತಿ ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಸುವಂತಹ ಸಂದರ್ಭದಲ್ಲಿ ಜಾಗರೂಕವಾಗಿ ಅವುಗಳನ್ನು ಸಂರಕ್ಷಸ ಬೇಕು. ಅವರು ತಮ್ಮ ತರಕಾರಿ ತೋಟದಲ್ಲಿ ವೈವಿಧ್ಯತೆಗೆ ಆಸ್ಪದ ನೀಡದೇ ವಿವಿಧ ಬಗೆಯ ತರಕಾರಿಗಳನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಕೃಷ್ಣಪ್ಪ ಪುರುಷ ಮಾತನಾಡಿ, ತರಕಾರಿ ಬೆಳೆಯುವುದು ನಮ್ಮ ಉಪಯೋಗಕ್ಕೆ ಆಗುವಂತೆ ಆರ್ಥಿಕವಾಗಿಯು ಸಹಕಾರಿಯಾಗುತ್ತದೆ. ಹಲವರು ಬಿತ್ತನೆ ಮಾಡುವಾಗ ಅನುಭವದ ಕೊರತೆಯಿಂದಾಗಿ ತರಕಾರಿ ಬೆಳೆಯಲ್ಲಿ ಸೋಲನ್ನು ಕಾಣುತ್ತೇವೆ. ತರಕಾರಿಯನ್ನು ನಿರಂತರವಾಗಿ ಬೆಳೆಸಬೇಕಾದರೆ ಬೀಜಗಳನ್ನು ಶೇಖರಿಸಿಡುವುದು ಅತ್ಯಗತ್ಯ. ಬೆಳೆ ಬೆಳೆಯುವುದಕ್ಕಾಗಿ ಸಾಲಗಳನ್ನು ತೆಗೆಯುವ ಸಂದರ್ಭದಲ್ಲಿ ಬೆಳಕಿನ ಕುರಿತಾಗಿ ಜಾಗೃತರಾಗಿರಬೇಕು ಅದೇ ರೀತಿ ವಿದ್ಯುತ್ ಬೆಳಕನಲ್ಲಿ ಬೆಳೆದಂತಹ ತರಕಾರಿಗಳು ಹೆಚ್ಚು ಫಸಲುದಾಯಕವಾಗಿರುವುದಿಲ್ಲ. ಎಂದರು.
ಶಿವಪ್ರಸಾದ್ ವರ್ಮುಡಿ ಮಾತನಾಡಿ, ಮನುಷ್ಯ ಪ್ರಾಮಾಣಿಕವಾಗಿ ಸಸ್ಯಹಾರಿ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲಿ ತರಕಾರಿ ಮಹತ್ವದ ಪಾತ್ರವನ್ನುವಹಿಸುತ್ತದೆ. ನಮ್ಮ ಶರೀರದ ತೂಕದ ಸಮತೋಲನಕ್ಕೆ ತರಕಾರಿ ಸಹಕಾರಿ. ಆದ್ದರಿಂದ ತರಕಾರಿಗಳನ್ನು ಕೀಟಗಳ ಬಾಧೆಯಿಂದ ರಕ್ಷಿಸುವುದು ಮುಖ್ಯ ಸಂಗತಿ. ನಮಗೆ ಬೇಕಾದ ತರಕಾರಿ ಗಳನ್ನು ನಾವೇ ಬೆಳೆಸುವ ಮೂಲಕ ಆರೋಗ್ಯವನ್ನು ವೃದ್ದಿಸಿಕೊಳ್ಳೋಣ. ಆ ಮೂಲಕ ಸ್ಥಳೀಯ ಜನರಿಗೂ ಮಾರ್ಗದರ್ಶನ ಮಾಡುವುದು ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ವಿವೇಕಾನಂದ ಬಿಎಡ್ ಕಾಲೇಜಿನ ಅದ್ಯಕ್ಷ ಪ್ರೊ.ಎ.ವಿ. ನಾರಾಯಣ ಮತ್ತು ಕಾಲೇಜಿನ ಪ್ರಾಂಶುಪಾಲ ದಿನೇಶ್ಚಂದ್ರ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಚಂದ್ರಕುಮಾರ್ ನಿರೂಪಿಸಿದರು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಕಾರ್ಯಕ್ರಮ ನಿರ್ವಹಿಸಿದರು.