ಸೋಲು ಗೆಲುವಿಗೆ ಮೆಟ್ಟಿಲಾಗಬೇಕು -ನ್ಯಾ. ಅಬ್ದುಲ್ ನಝೀರ್
ಪುತ್ತೂರು, ಫೆ. 24: ಸೋಲಿಗೆ ಯಾರೂ ಧೃತಿಗೆಡಬೇಕಾಗಿಲ್ಲ. ಇಂದು ಸೋತವರು ನಾಳೆ ಗೆಲುವನ್ನು ಪಡೆಯಬಹುದು. ಸೋಲನ್ನು ಬದುಕಿನ ಭಾಗವೆಂದು ಭಾವಿಸಬೇಕು. ಸೋಲು ಗೆಲುವಿಗೆ ಮೆಟ್ಟಲಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.
ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ(ಮೂಟ್ ಕೋರ್ಟ್) ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿವೇಕ ಮತ್ತು ವೈರಾಗ್ಯದ ಬದುಕು ಕಂಡಿರುವ ಸ್ವಾಮಿ ವಿವೇಕಾನಂದರು ಯುವ ಜನತೆಗೆ ಸ್ಪೂರ್ತಿಯಾಗಿದ್ದು. ಅವರು ಬಡತನ ನಿರ್ಮೂಲನೆಗೆ, ದೇಶವಾಸಿಗಳನ್ನು ಮುಖ್ಯವಾಹಿನಿಗೆ ತರಲು, ಸೇವೆ ನೀಡುವ ಮನೋಭಾವನೆಗಾಗಿ ಶ್ರಮಿಸಿದರು. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬಹುದು ಎಂದು ನಂಬಿಕೊಂಡಿದ್ದರು. ಅವರ ಬದುಕು ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದ ಅವರು ಜೀವನ ಪಥದಲ್ಲಿ ಪಯಣವೇ ಮುಖ್ಯ ಆಗುತ್ತದೆ. ಗೆಲುವು ಪಡೆದುಕೊಳ್ಳುವುದೇ ಜೀವನವಲ್ಲ. ಪ್ರತಿಯೊಂದು ಹೆಜ್ಜೆಯೂ ಕೂಡ ಯಶಸ್ಸಿನ ಮೆಟ್ಟಿಲಾಗುತ್ತದೆ. ಭಾಗವಹಿಸುವಿಕೆ ಮುಖ್ಯವೇ ಹೊರತು ಗೆಲುವಲ್ಲ. ಆದ್ದರಿಂದ ಸೋಲಿಗೆ ಮರುಗಬೇಡಿ. ಇಂದು ಸೋತವರು ನಾಳೆ ಉತ್ತಮ ಸಾಧನೆ ಮಾಡಬಹುದು ಎಂದರು.
ಟೀಮ್ ವರ್ಕ್ ಎನ್ನುವುದು ತುಂಬಾ ಅಗತ್ಯ ವಿಷಯ. ಅದರಲ್ಲೂ ರಾಷ್ಟ್ರಮಟ್ಟದ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಹಿಂದೆ ಸಾಕಷ್ಟು ಟೀಮ್ ವರ್ಕ್ ಇರುತ್ತದೆ. ದೇಶದ 32 ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೆಡೆ ತಂದಿರುವುದು ಉತ್ತಮ ಕೆಲಸ. ತಾನು ಕೂಡ ಪುತ್ತೂರಿನವನೇ. ತಾನು ಮೊದಲಿಗೆ ಮಾತು ಕಲಿತದ್ದು ತುಳುವಿನಲ್ಲಿಯೇ ಹೊರತು ಕನ್ನಡದಲ್ಲಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಭಯ, ಭಾಷಾ ಸಮಸ್ಯೆ ಇರುತ್ತದೆ. ಇದನ್ನು ಮೀರಿ ಕಾರ್ಯಕ್ರಮ ಯಶಸ್ಸಾಗಿದೆ ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ, ಔದ್ಯೋಗಿಕ ಬದುಕಿನಲ್ಲಿ ನಮ್ಮ ಜೀವನದ ಭದ್ರತೆ ಹಾಗೂ ಗುರುತಿಸುವಂತೆ ಮಾಡುವುದು ಪ್ರಮುಖವಾದ ಎರಡು ವಿಚಾರ. ನಮ್ಮ ಕೆಲಸಗಳು ಸಮಾಜದಲ್ಲಿ ಪ್ರತಿಬಿಂಬಿಸುತ್ತಿರುತ್ತವೆ. ಆದ್ದರಿಂದ ವಕೀಲಿ ವೃತ್ತಿಯನ್ನು ಐಟಿ, ಬಿಟಿ ವೃತ್ತಿಯ ಜತೆ ಹೋಲಿಸಿಕೊಳ್ಳಬೇಡಿ. ಸ್ವಾತಂತ್ರ್ಯ ಹೋರಾಟದಲ್ಲೂ ಕಾನೂನು ವಿಷಯಗಳು ಮುಂಭಾಗದಲ್ಲಿ ನಿಂತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ನೈತಿಕತೆಯನ್ನು ಮರೆಯದೇ, ಜೀವನದಲ್ಲಿ ಮುಂದಡಿ ಇಡಬೇಕು ಎಂದರು.
ಕಾನೂನು ಕೆಲಸಗಳಿಗೆ ಬಹಳ ಪ್ರಾಮುಖ್ಯತೆ ಇದೆ. ವಕೀಲರ ಮೂಲಕ ವ್ಯವಸ್ಥೆಗೆ ನ್ಯಾಯ ಕೊಡುವ ಕೆಲಸ ನಡೆಯುತ್ತಿರುವುದರಿಂದ ಈ ಪ್ರಾಮುಖ್ಯತೆ ನ್ಯಾಯಾಂಗ ವ್ಯವಸ್ಥೆಗೆ ಬಂದಿದೆ. ಇಲ್ಲಿ ವಕೀಲರಿಲ್ಲದೇ ಇದ್ದರೆ, ನ್ಯಾಯಾ„ೀಶರು ಕೂಡ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬದಲಾಗುತ್ತಿರುವ ಮನಸ್ಥಿತಿಗೆ ಅನುಗುಣವಾಗಿ ಕಾನೂನು ಕಾಲೇಜುಗಳು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಾಗಿದೆ. ಇದಕ್ಕೆ ವಕೀಲರ ಸಂಘವೂ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ಹೈಕೋರ್ಟ್ ನ್ಯಾಯಾಧೀಶರಾದ ಬಿ. ವೀರಪ್ಪ, ಮೊಹಮ್ಮದ್ ನವಾಜ್ ಅವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ನ್ಯಾ. ಅಬ್ದುಲ್ ನಝೀರ್, ನ್ಯಾ. ನಾಗರತ್ನ, ನ್ಯಾ. ಬಿ. ವೀರಪ್ಪ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ವಕೀಲರಾದ ಮನೀಷ್ ಸಾಲ್ಯಾನ್, ಅರುಣ್ ಶ್ಯಾಂ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುತ್ತೂರು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಮಹಾವಿದ್ಯಾಲಯದ ಡೈರೆಕ್ಟರ್ ಆಫ್ ಲೀಗಲ್ ಸ್ಟಡೀಸ್ ಡಾ. ಬಿ.ಕೆ. ರವೀಂದ್ರ, ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಜೋಶಿ ಬಿ., ಸಂಚಾಲಕ ವಿಜಯ ನಾರಾಯಣ ಕೆ.ಎಂ., ವಕೀಲ ಬಿ. ನರಸಿಂಹ ಪ್ರಸಾದ್, ಕಾಲೇಜು ವಿದ್ಯಾರ್ಥಿ ನಾಯಕ ಶಾಶ್ವತ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಜೇಂದ್ರ ಪ್ರಸಾದ್ ಎ. ಸ್ವಾಗತಿಸಿದರು.