×
Ad

ಉದ್ವಿಗ್ನ ಕಾಶ್ಮೀರ: ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡುತ್ತಿರುವ ಜನರು

Update: 2019-02-24 22:16 IST

ಶ್ರೀನಗರ,ಫೆ.24: ಕಾಶ್ಮೀರ ಕಣಿವೆಯಲ್ಲಿ ಸದ್ಯ ತಲೆದೋರಿರುವ ಉದ್ವಿಗ್ನತೆಯಿಂದ ಜನರು ಅಗತ್ಯ ವಸ್ತುಗಳನ್ನು ಹೆಚ್ಚುವರಿಯಾಗಿ ಖರೀದಿಸಿ ತಮ್ಮ ಮನೆಯಲ್ಲಿ ಶೇಖರಿಸಿಡಲು ಮುಂದಾಗಿರುವ ಮಧ್ಯೆಯೇ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ರಾಜ್ಯದ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಣಿವೆ ರಾಜ್ಯದಲ್ಲಿ ಸದ್ಯ ತಲೆದೋರಿರುವ ಉದ್ವಿಗ್ನತೆಯು ಮುಂದಿನ ದಿನಗಳಲ್ಲಿ ನಡೆಯಬಹುದಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತಷ್ಟು ವಿಕೋಪಕ್ಕೆ ತೆರಳುತ್ತಿದೆ ಎಂದು ಪಕ್ಷದ ಅಧ್ಯಕ್ಷರು ಗೃಹ ಸಚಿವರಿಗೆ ಮನವರಿಕೆ ಮಾಡಿದ್ದಾರೆ ಎಂದು ನ್ಯಾಶನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ತಿಳಿಸಿದ್ದಾರೆ.

ಜನರು ಮಾರುಕಟ್ಟೆಗಳಿಂದ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುತ್ತಿದ್ದು ಪೆಟ್ರೋಲ್ ಹಾಕಿಸಲು ಪಂಪ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ತಲೆದೋರಿದೆ ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಸರಕಾರಿ ಇಲಾಖೆಗಳು ಹೊರಡಿಸಿದ ಸೂಚನೆಗಳು ಕಣಿವೆ ರಾಜ್ಯದಲ್ಲಿ ದೀರ್ಘ ಕಾಲದವರೆಗೆ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳತ್ತ ಬೆಟ್ಟು ಮಾಡುತ್ತಿದ್ದ ಕಾರಣ ಆತಂಕಗೊಂಡ ಶ್ರೀನಗರ ಮತ್ತು ಇತರ ಎರಡು ಪ್ರಮುಖ ಪಟ್ಟಣಗಳ ಜನರು ಬೇಕಾಬಿಟ್ಟಿ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಶೇಖರಿಸಿಡಲು ಮುಂದಾಗಿದ್ದಾರೆ ಎಂದು ಅಬ್ದುಲ್ಲಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News