ಸಂಯುಕ್ತ ರಂಗದ ಸರಕಾರಕ್ಕೆ ಇದು ಸಕಾಲ: ಟಿಆರ್‌ಎಸ್
ತಿರುವನಂತಪುರಂ, ಫೆ.24: ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸಬೇಕಿದ್ದು, ಕೇಂದ್ರದಲ್ಲಿ ಸಂಯುಕ್ತ ರಂಗದ ಸರಕಾರ ಅಧಿಕಾರಕ್ಕೆ ಬರಲು ಇದು ಸಕಾಲವಾಗಿದೆ ಎಂದು ಟಿಆರ್‌ಎಸ್ ಸಂಸದೆ ಕೆ ಕವಿತಾ ಹೇಳಿದ್ದಾರೆ.
ತಿರುವನಂತಪುರಂ ಪ್ರೆಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಕಿತ್ತೊಗೆಯಬೇಕಿದ್ದು , ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆಯಲ್ಲಿ ಸಂಯುಕ್ತ ರಂಗ ಸ್ಥಾಪಿಸಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯನಿರತವಾಗಿದೆ ಎಂದರು.
ಕವಿತಾ ಟಿಆರ್‌ಎಸ್ ಅಧ್ಯಕ್ಷ, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ. ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದು ಪ್ರಾದೇಶಿಕ ಪಕ್ಷಗಳ ಮೂಲ ಅಜೆಂಡಾವಾಗಿರಬೇಕು. ಈ ಎರಡೂ ಪಕ್ಷಗಳಿಗೆ ಜನತೆ ಸಾಕಷ್ಟು ಅವಕಾಶ ನೀಡಿದ್ದರೂ ಅದನ್ನು ಅವರು ವ್ಯರ್ಥವಾಗಿಸಿದ್ದಾರೆ. ಈ ಬಾರಿ ಮತ್ತೊಬ್ಬರಿಗೆ ಅವಕಾಶ ದೊರಕಬೇಕು ಎಂದು ಕವಿತಾ ಹೇಳಿದರು. ಪ್ರಾದೇಶಿಕ ಪಕ್ಷಗಳ ಪ್ರಸ್ತಾವಿತ ಒಕ್ಕೂಟಕ್ಕೆ ತೃತೀಯ ರಂಗ ಎಂಬ ಹೆಸರು ಸರಿಯಲ್ಲ, ಸಂಯುಕ್ತ ರಂಗ ಎಂಬ ಹೆಸರೇ ಸೂಕ್ತ. ಯಾಕೆಂದರೆ ಚುನಾವಣೆಯಲ್ಲಿ ನಾವು ಪ್ರಥಮ ರಂಗವಾಗಿ ಹೊರಹೊಮ್ಮುವ ಸಾಧ್ಯತೆಯೂ ಇದೆ ಎಂದರು.
ಮೀಸಲಾತಿ, ಶಿಕ್ಷಣ, ಆರೋಗ್ಯ ಮುಂತಾದ ಪ್ರಮುಖ ವಿಷಯಗಳಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯಗಳಿಗಿರಬೇಕು. ಸಮಾನ ಮನಸ್ಕ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಈ ವಿಷಯದ ಬಗ್ಗೆ ಗಮನ ಹರಿಸಲಿದೆ. ಅಲ್ಲದೆ ರಾಷ್ಟ್ರದ ಅಭಿವೃದ್ಧಿಯ ವಿಷಯ ನಮ್ಮ ಪ್ರಮುಖ ಅಜೆಂಡಾ ಆಗಿರಲಿದೆ ಎಂದವರು ಹೇಳಿದ್ದಾರೆ. ಮೋದಿ ಕಳೆದ ಬಾರಿಯ ಚುನಾವಣೆಯ ಸಂದರ್ಭ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಭರವಸೆ ನೀಡಿದ್ದರು. ಆದರೆ ಸುಮಾರು ಐದು ವರ್ಷದ ಆಡಳಿತದಲ್ಲಿ , ಲೋಕಸಭೆಯಲ್ಲಿ ಬಹುಮತವಿದ್ದರೂ ಅವರಿಗೆ ಇದನ್ನು ಮಾಡಲಾಗಿಲ್ಲ. ಮತದಾರರನ್ನು ಸದಾ ಕಾಲಕ್ಕೂ ಭ್ರಮಾಲೋಕದಲ್ಲಿ ತೇಲಾಡಿಸಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಮರೆತಿರಬಹುದು ಎಂದು ಕವಿತಾ ಹೇಳಿದರು. ಕೇರಳ ಸರಕಾರದ ಕುಟುಂಬಶ್ರೀ ಯೋಜನೆಯನ್ನು ಶ್ಲಾಘಿಸಿದ ಅವರು, ಮಹಿಳಾ ಸಶಕ್ತೀಕರಣ ಹೇಗೆ ಸಾಧ್ಯವೆಂಬುದನ್ನು ಕೇರಳ ಸರಕಾರ ಮಾಡಿ ತೋರಿಸಿದೆ. ಇದೇ ಮಾದರಿಯ ಯೋಜನೆಯನ್ನು ತೆಲಂಗಾಣದಲ್ಲೂ ಅನುಷ್ಟಾನಗೊಳಿಸಲು ಬಯಸಿದ್ದೇವೆ ಎಂದು ಕವಿತಾ ಹೇಳಿದ್ದಾರೆ.