ಉಗ್ರವಾದದ ಮೂಲೋಚ್ಛಾಟನೆಗೆ ಸೇನೆಯಿಂದ ಸ್ಫೂರ್ತಿ: ಪ್ರಧಾನಿ ಮೋದಿ

Update: 2019-02-24 17:20 GMT

   ಹೊಸದಿಲ್ಲಿ, ಫೆ.24: ಪುಲ್ವಾಮಾ ದಾಳಿಯ ಬಳಿಕ ಭಯೋತ್ಪಾದಕರು ಹಾಗೂ ಅವರಿಗೆ ನೆಲೆ ಒದಗಿಸುವವರನ್ನು ತೊಡೆದುಹಾಕಲು ಸೇನೆ ಕಟಿಬದ್ಧವಾಗಿದೆ . ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ 40 ಯೋಧರ ಬಲಿದಾನವು ಉಗ್ರವಾದದ ಮೂಲವನ್ನೇ ಕಿತ್ತೊಸೆಯಲು ಸದಾ ನಮಗೆ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರೇಡಿಯೊದಲ್ಲಿ ಪ್ರಸಾರವಾದ ತಮ್ಮ 53ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದ ಜನತೆ ಭೀತಿವಾದದ ವಿರುದ್ಧದ ಹೋರಾಟದಲ್ಲಿ ಜಾತಿ, ಕೋಮು, ಧರ್ಮ- ಈ ಎಲ್ಲಾ ತಡೆಗಳನ್ನೂ ಮೀರಿ ಬೆಂಬಲ ನೀಡಿದ್ದಾರೆ ಎಂದರು. ಯೋಧರ ಹತ್ಯೆ ಸಂಚಿನ ರೂವಾರಿಗಳನ್ನು ಘಟನೆ ನಡೆದ 100 ಗಂಟೆಯೊಳಗೆ ಸೇನಾಪಡೆ ಹೊಡೆದುರುಳಿಸಿದೆ ಎಂದ ಮೋದಿ, ಪುಲ್ವಾಮ ದಾಳಿಯಲ್ಲಿ ಬಲಿಯಾದ ಸೈನಿಕರ ಕುಟುಂಬದ ಪ್ರತಿಕ್ರಿಯೆ ಸ್ಫೂರ್ತಿದಾಯಕವಾಗಿತ್ತು ಎಂದರು.

ಉಗ್ರರ ದಾಳಿಯಲ್ಲಿ ಮೃತಪಟ್ಟ ಯೋಧರ ಗೌರವಾರ್ಥ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ತಿಳಿಸಿದ ಅವರು, ಇಂತಹ ಯುದ್ದ ಸ್ಮಾರಕಗಳನ್ನು ಇದುವರೆಗೆ ಯಾಕೆ ನಿರ್ಮಿಸಿಲ್ಲ ಎಂಬುದು ಅಚ್ಚರಿಯ ಮತ್ತು ನೋವಿನ ಪ್ರಶ್ನೆಯಾಗಿದೆ ಎಂದರು.

 ಇದೇ ಸಂದರ್ಭ ಅವರು 1900ರ ಮಾರ್ಚ್ 3ರಂದು ಬ್ರಿಟಿಷ್ ಪಡೆಗಳಿಂದ ಬಂಧಿಸಲ್ಪಟ್ಟಿದ್ದ ಆದಿವಾಸಿ ಮುಖಂಡ ಬಿರ್ಸ ಮುಂಡ, ಮಾರ್ಚ್ 3ರಂದು ಜನ್ಮದಿನಾಚರಣೆ ಆಚರಿಸಿಕೊಳ್ಳಲಿರುವ ಖ್ಯಾತ ಉದ್ಯಮಿ ಜಮ್‌ಸೇಟ್‌ಜಿ ಟಾಟಾ, ಫೆ.29ರಂದು ಜನಿಸಿರುವ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿವರಿಗೆ ನುಡಿ ನಮನ ಸಲ್ಲಿಸಿದರು. ಸಂವಿಧಾನಕ್ಕೆ 44ನೇ ತಿದ್ದುಪಡಿ ತರುವ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಈ ದೇಶಕ್ಕೆ ಮತ್ತೊಮ್ಮೆ ತುರ್ತುಪರಿಸ್ಥಿತಿಯ ಕರಿಛಾಯೆ ಆವರಿಸದಂತೆ ಮಾಡಿದರು. ಈ ತಿದ್ದುಪಡಿಯು ಸುಪ್ರೀಂಕೋರ್ಟ್‌ನ ಕೆಲವೊಂದು ಅಧಿಕಾರವನ್ನು ಮರುಸ್ಥಾಪಿಸಿತು ಹಾಗೂ ಸಂವಿಧಾನದ 20 ಮತ್ತು 21ನೇ ವಿಧಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ತುರ್ತುಪರಿಸ್ಥಿತಿಯ ಸಂದರ್ಭ ಕಿತ್ತುಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಸಚಿವ ಸಂಪುಟದ ಲಿಖಿತ ಶಿಫಾರಸಿನ ಬಳಿಕ ಮಾತ್ರ ರಾಷ್ಟ್ರಪತಿ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು ಮತ್ತು ಯಾವುದೇ ಕಾರಣಕ್ಕೂ ಇದು ಆರು ತಿಂಗಳನ್ನು ಮೀರುವಂತಿಲ್ಲ ಎಂದು ಪ್ರಥಮ ಬಾರಿಗೆ ಸಂವಿಧಾನದಲ್ಲಿ ಸೇರಿಸಲಾಯಿತು.

1975ರಲ್ಲಿ ತುರ್ತುಪರಿಸ್ಥಿತಿಯ ರೂಪದಲ್ಲಿ ಪ್ರಜಾಪ್ರಭುತ್ವದ ಮೇಲಾಗಿರುವ ದಾಳಿ ಮತ್ತೆ ಪುನರಾವರ್ತನೆಯಾಗದಂತೆ ದೇಸಾಯಿ ಖಾತರಿಪಡಿಸಿದರು ಎಂದು ಮೋದಿ ಹೇಳಿದರು. ಇತ್ತೀಚಿಗೆ ಪದ್ಮ ಪ್ರಶಸ್ತಿ ಪಡೆದವರ ವಿನಯ ಸಂಪನ್ನತೆ ಹಾಗೂ ವಿನಮ್ರತೆಯ ಹಿನ್ನೆಲೆಯನ್ನು ಉಲ್ಲೇಖಿಸಿದ ಮೋದಿ, ಪದ್ಮಪ್ರಶಸ್ತಿ ಪಡೆದವರ ಹೆಸರು ಪ್ರಕಟವಾದ ಬಳಿಕ ಕೆಲವರ ಬಗ್ಗೆ ಜನತೆ ಕುತೂಹಲದಿಂದ ಪ್ರಶ್ನಿಸಲು ತೊಡಗಿದರು. ಈ ಸಾಧಕರು ಪ್ರಚಾರದ ಹಂಗಿಲ್ಲದೆ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸುತ್ತಿದುದಕ್ಕೆ ಇದು ದ್ಯೋತಕವಾಗಿದೆ. ಈ ಪ್ರತಿಷ್ಟಿತ ಪುರಸ್ಕಾರ ಪಡೆದವರಲ್ಲಿ 12 ರೈತರೂ ಸೇರಿದ್ದಾರೆ ಎಂದು ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News