ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಿಳಿವಿಂಡು ಸಮಾವೇಶ
ಕೊಣಾಜೆ, ಫೆ. 24; ಉನ್ನತ ಶಿಕ್ಷಣದಲ್ಲಿ ಭಾಷೆ ಮತ್ತು ಮಾನವಿಕ ವಿಭಾಗಗಳನ್ನು ಅನುತ್ಪಾದಕ ಎಂಬಂತೆ ನೋಡುವ ಕ್ರಮ ಸರಿಯಲ್ಲ. ಇವು ಸಮಾಜದ ಬದುಕನ್ನು ರೂಪಿಸುವ ವೈಚಾರಿಕ ನೆಲೆಯನ್ನು ಹೊಂದಿದೆ ಎಂದು ದೆಹಲಿಯ ಜೆಎನ್‍ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ರವಿವಾರ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸಿಬ್ಬಂದಿಗಳ ಒಕ್ಕೂಟ ಗಿಳಿವಿಂಡು ಇದರ ಮೂರನೇ ಸಮಾವೇಶದಲ್ಲಿ ಉನ್ನತ ಶಿಕ್ಷಣ ಮತ್ತು ಕನ್ನಡ ಎಂಬ ವಿಷಯದಲ್ಲಿ ಮಾತನಾಡಿದರು.
2011ರ ಭಾಷಾಗಣತಿಯ ಪ್ರಕಾರ ಭಾಷೆಗಳನ್ನಾಡುವ ಜನರ ಏರಿಕೆಯಲ್ಲಿ ಹಿಂದಿಯಲ್ಲಿ ಶೇ.43, ತೆಲುಗು, ತಮಿಳು ಭಾಷೆ ಶೇ. 9 ಬೆಳವಣಿಗೆಯನ್ನು ಕಂಡಿದ್ದು ಕನ್ನಡ ಶೇ.3.1 ಬೆಳವಣಿಗೆಯನ್ನು ಹೊಂದಿದ್ದು ಇದು ದೇಶದಲ್ಲೇ ಕನಿಷ್ಟವಾಗಿದೆ. ಇದು ಅಪಾಯಕಾರಿ ಕುಸಿತ. ಕನ್ನಡದ ಹೆಚ್ಚಿನ ಬಳಕೆ ಮತ್ತು ಕನ್ನಡದೊಳಗಿನ ಶಕ್ತಿಯನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತರುವ ಮೂಲಕ ನಾವು ಈ ಆತಂಕದಿಂದ ಪಾರಾಗಬೇಕಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಬಿ.ಎ ವಿವೇಕ ರೈ ಅವರು ಮಾತನಾಡಿ ವರ್ತಮಾನದ ಬದುಕಲ್ಲಿ ದುಡ್ಡಿನ ಮೋಹ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿದ್ದು ಭ್ರಷ್ಟತೆಗೆ ಕಾರಣವಾಗಿದೆ. ಸಾಹಿತ್ಯದ ಓದು ಮೌಲ್ಯ ನಿಷ್ಟತೆಯನ್ನು ಒದಗಿಸಿ ಸಮಾಜಮುಖಿಯಾಗುವಂತೆ ಮಾಡುತ್ತದೆ ಎಂದರು.
ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಎ. ಎಂ ಖಾನ್ ವಹಿಸಿದ್ದರು. ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಆಗಬೇಕು. ಆಡಳಿತದಲ್ಲಿ ಮತ್ತು ಮಾಧ್ಯಮದಲ್ಲಿ ಸ್ವಚ್ಛಕನ್ನಡದ ಬಳಕೆ ಹೆಚ್ಚಾಗಬೇಕು ಎಂದರು.
ಗಿಳಿವಿಂಡು ಒಕ್ಕೂಟದ ಅಧ್ಯಕ್ಷ ಪ್ರೊ. ಬಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ನಾಗಪ್ಪ ಗೌಡ ವಂದಿಸಿದರು. ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು.
ಸಮಾವೇಶದಲ್ಲಿ ಗಿಳಿವಿಂಡಿನ ಮಹಾಸಭೆ ನಡೆದು 2020ರಲ್ಲಿ ಗಿಳಿವಿಂಡು ಮಹಾಸಮಾವೇಶ ನಡೆಸುವ ಬಗ್ಗೆ ಚರ್ಚಿಸಲಾಯಿತು. ಅಪರಾಹ್ನ ನಡೆದ ದಾಖಲೀಕರಣದಲ್ಲಿ ಕನ್ನಡ ವಿಭಾಗದ ಈ ಹಿಂದಿನ 49 ತಂಡಗಳ ದಾಖಲೀಕರಣವನ್ನು ನಡೆಸಲಾಯಿತು. ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.