ಕುಂಭಮೇಳ: ಸ್ವಚ್ಛತಾ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಮೋದಿ

Update: 2019-02-24 17:56 GMT

  ಹೊಸದಿಲ್ಲಿ, ಫೆ.24: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರವಿವಾರ ಪಾಲ್ಗೊಂಡು ಪವಿತ್ರಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಆ ಬಳಿಕ ನಡೆದ ಸ್ವಚ್ಛತಾ ಪ್ರಶಸ್ತಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಸ್ವಚ್ಛತಾ ಕಾರ್ಮಿಕರ ಪಾದ ತೊಳೆದು ಅವರಿಗೆ ಗೌರವ ಸಲ್ಲಿಸಿದರು.

ಸ್ವಚ್ಛ ಕುಂಭ, ಸ್ವಚ್ಛ ಗೌರವ ಪುರಸ್ಕಾರವನ್ನು ಹಲವರಿಗೆ ಪ್ರದಾನ ಮಾಡಿದ ಪ್ರಧಾನಿ ಮೋದಿ, ಬಳಿಕ ಟಿವಿ ಚಾನೆಲ್ ಗಳ ಕ್ಯಾಮೆರಾದ ಎದುರು ಐವರು ಕಾರ್ಮಿಕರ ಪಾದ ತೊಳೆದು ಅಭಿನಂದಿಸಿದರು. ಮೂರು ನದಿಗಳ ಸಂಗಮ ಸ್ಥಳವೆಂದು ಹೇಳಲಾಗಿರುವ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಿಲಿಯಾಂತರ ಜನರು ಭಾಗವಹಿಸಿದ್ದು ಇಲ್ಲಿಯ ಸ್ವಚ್ಛತಾ ಕಾರ್ಯ ಬಹುದೊಡ್ಡ ಸಮಸ್ಯೆಯಾಗಿತ್ತು. ಆದರೆ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ ಸ್ವಚ್ಛತಾ ಕಾರ್ಮಿಕರು ನಿಜಕ್ಕೂ ಅಭಿನಂದನಾರ್ಹರು.

20 ಸಾವಿರಕ್ಕೂ ಅಧಿಕ ಕಸದ ಡಬ್ಬಿಗಳು, 1 ಲಕ್ಷ ಶೌಚಾಲಯಗಳು.. ಇವನ್ನು ಗಮನಿಸಿದರೆ ಎಷ್ಟು ಮಂದಿ ಸ್ವಚ್ಛತಾ ಕಾರ್ಮಿಕರು ಇಲ್ಲಿ ಸೇವೆ ಸಲ್ಲಿಸಿರಬಹುದು ಎಂದು ಆಶ್ಚರ್ಯವಾಗುತ್ತದೆ ಎಂದ ಪ್ರಧಾನಿ, ಸ್ವಚ್ಛತಾ ಕಾರ್ಮಿಕರನ್ನು ಕರ್ಮಯೋಗಿಗಳೆಂದು ಬಣ್ಣಿಸಿದರು. ಇವರೆಲ್ಲಾ ನನ್ನ ಸಹೋದರ ಸಹೋದರಿಯರು. ಬೆಳಿಗ್ಗೆ ಬೇಗನೆ ಎದ್ದು, ರಾತ್ರಿ ತಡವಾಗಿ ಮಲಗಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಗೊಂದಲಕ್ಕೆ ಎಡೆನೀಡದೆ ಇವರು ನಡೆಸುವ ಕಾರ್ಯ ಅಭಿನಂದನಾರ್ಹ ಎಂದರು.

ಬಳಿಕ ಐದು ಮಂದಿ ಸ್ವಚ್ಛತಾ ಕಾರ್ಮಿಕರಿಗೆ ‘ಸ್ವಚ್ಛ ಕುಂಭ, ಸ್ವಚ್ಛ ಗೌರವ’ ಪುರಸ್ಕಾರ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಯೋಜನೆಗೆ ಚಾಲನೆ ನೀಡಿದರು. =

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News