ಪುಲ್ವಾಮ ದಾಳಿಕೋರ ಸ್ಫೋಟಕವನ್ನು ಕಲ್ಲುಗಣಿಯಲ್ಲಿ ಬಚ್ಚಿಟ್ಟಿದ್ದನೇ ?

Update: 2019-02-25 05:54 GMT

ಪುಲ್ವಾಮ, ಫೆ. 25: ಪುಲ್ವಾಮಾ ಆತ್ಮಹತ್ಯಾ ದಾಳಿಕೋರ ಅದಿಲ್ ಅಹ್ಮದ್ ದರ್ ದಾಳಿಗೆ ಬಳಸಿದ ಭಾರಿ ಪ್ರಮಾಣದ ಸ್ಫೋಟಕವನ್ನು ಕಲ್ಲುಗಣಿಯಲ್ಲಿ ಬಚ್ಚಿಟ್ಟಿದ್ದ ಎಂಬ ಶಂಕೆಯ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಇತ್ತೀಚೆಗೆ ಕಲ್ಲು ಗಣಿಗಾರಿಕೆ ನಿಲ್ಲಿಸಿದ ಗಣಿಗಳನ್ನು ಗುಪ್ತಚರ ವಿಭಾಗದ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಫೆ.14ರ ಪುಲ್ವಾಮ ದಾಳಿಗೆ ಜೆಇಎಂ ಉಗ್ರರು ಮಿಲಿಟರಿ ಗ್ರೇಡ್‌ನ ಆಮದು ಆರ್‌ಡಿಎಕ್ಸ್ ಬಳಸಿದ್ದು, ಇದನ್ನು ಪಾಕಿಸ್ತಾನದಿಂದ ತಂದಿರುವ ಸಾಧ್ಯತೆ ಇದೆ. ಈ ಅತ್ಯಾಧುನಿಕ ಸಾಧನಗಳನ್ನು ಸ್ಥಳೀಯ ಕಲ್ಲು ಗಣಿಗಳಲ್ಲಿ ಸಂಗ್ರಹಿಸಿ ಇಟ್ಟಿರಬೇಕು ಎಂದು ಗುಪ್ತಚರ ಮೂಲಗಳು ಹೇಳಿವೆ.

ಪುಲ್ವಾಮ, ಅನಂತನಾಗ್ ಮತ್ತು ಶೋಪಿಯಾನ್ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಕಲ್ಲುಗಣಿಗಳಿವೆ. ಈ ಗಣಿಗಳು ಸಾಮಾನ್ಯವಾಗಿ ಅಕ್ರಮವಾಗಿ ಖರೀದಿಸಿದ ಸ್ಫೋಟಕ ಮತ್ತು ಡೆಟೊನೇಟರ್‌ಗಳನ್ನು ಬಳಸುತ್ತವೆ. ಈ ಹಿನ್ನೆಲೆಯಲ್ಲಿ ಶ್ರೀನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ಎಲ್ಲ ಕಲ್ಲುಗಣಿಗಳು, ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳು ಹಾಗೂ ಸ್ಫೋಟಕಗಳ ಮಾರಾಟ ಕೇಂದ್ರಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಶ್ರೀನಗರದ ಪಂಥಚೌಕ್ ಮತ್ತು ಅತ್ವಾಜನ್ ಪ್ರದೇಶದ ಗಣಿಗಾರಿಕೆಯನ್ನು ಪರಿಸರ ಕಾರಣಗಳಿಂದ ನಿಷೇಧಿಸಲಾಗಿತ್ತು. ಆದಾಗ್ಯೂ ದಕ್ಷಿಣ ಕಾಶ್ಮೀರದ ಕೆಲ ಗಣಿಗಳಲ್ಲಿ ಸ್ಫೋಟಕಗಳು, ಸೇಫ್ಟಿ ಫ್ಯೂಸ್, ಅಲ್ಯೂಮೀನಿಯಂ ಎಲೆಕ್ಟ್ರಿಕ್ ಡೆಟೊನೇಟರ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

"ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಅಷ್ಟೊಂದು ದೊಡ್ಡ ಪ್ರಮಾಣದ ಆರ್‌ಡಿಎಕ್ಸ್ ಅಥವಾ ಯಾವುದೇ ಸ್ಫೋಟಕಗಳನ್ನು ಒಂದೇ ದಿನ ಒಂದು ಕಾರಿನಲ್ಲಿ ಒಯ್ಯುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಲ್ಲು ಗಣಿಗಾರಿಕೆ ಸ್ಥಳಗಳಲ್ಲಿ ಇವುಗಳನ್ನು ಬಚ್ಚಿಟ್ಟಿರುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದ್ದೇವೆ" ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News