×
Ad

ಶಕ್ತಿನಗರ ವಸತಿ ಯೋಜನೆಯ ಜಮೀನು ಸಮಸ್ಯೆ ಇತ್ಯರ್ಥಕ್ಕೆ ನಳಿನ್ ಸೂಚನೆ

Update: 2019-02-25 18:19 IST

ಮಂಗಳೂರು, ಫೆ.25: ನಗರ ಹೊರವಲಯದ ಶಕ್ತಿನಗರದಲ್ಲಿ ಮನಪಾ ವತಿಯಂದ ನಿರ್ಮಿಸಲು ಉದ್ದೇಶಿಸರುವ 930 ಮನೆಗಳ ಜಮೀನ ಕುರಿತು ಉದ್ಭವಿಸಿರುವ ಸಮಸ್ಯೆಯನ್ನು ಕಂದಾಯ, ಮನಪಾ ಂಗಳೂರು ಮಹಾ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಶೀಘ್ರ ಇತ್ಯರ್ಥಪಡಿಸಿ ಕಾಮಗಾರಿ ಆರಂಭಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.

ದ.ಕ. ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

7 ಕೋ.ರೂ. ಅನುದಾನ ಬಿಡುಗಡೆಗೊಂಡು ವರ್ಷ ಕಳೆದರೂ ಶಕ್ತಿನಗರದಲ್ಲಿ ಇಂದಿರಾ ಆವಾಸ್ ಯೋಜನೆಯ ಮನೆಗಳ ಕಾಮಗಾರಿಗೆ ಚಾಲನೆ ನೀಡದಿರುವ ಕುರಿತು ನಳಿನ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಶಾಸಕರು ಶಿಲಾನ್ಯಾಸ ಮಾಡಿದ್ದಾರೆ. ಹಂಚಿಕೆ ಪತ್ರ ವಿತರಿಸಿದ್ದಾರೆ. ಆದರೆ ಜಮೀನು ಸಮಸ್ಯೆ ಇರುವುದರಿಂದ ಕಾಮಗಾರಿ ನಡೆಯುತ್ತಿಲ್ಲ. ಯಾವಾಗ ಮನೆ ನೀಡುತ್ತೀರಿ ಎಂದು ಜನತೆ ನನ್ನ ಬಳಿ ಪ್ರಶ್ನಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕೇಂದ್ರ ಸರಕಾರದ ಇಂದಿರಾ ಆವಾಸ್ ಮತ್ತು ಪ್ರಧಾನ ಮಂತ್ರಿ ಆವಾಸ್‌ನ ವಸತಿ ಯೋಜನೆಯನ್ನು ಸಕಾಲದಲ್ಲಿ ಅನುಷ್ಠಾನ ಮಾಡಲು ನಗರಾಡಳಿತ ಸ್ಥಳೀಯ ಸಂಸ್ಥೆಗಳು ಮುಂದಾಗುವ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸ್ವಂತ ಮನೆ ಹೊಂದಲು ಸಹಕರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದರು.

ವಿನಾಕಾರಣ ಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಬೇಡಿ. ಕ್ಲಿಷ್ಟಕರ ಸಂದರ್ಭ ಎದುರಾದರೆ ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡಿ ಅರ್ಜಿದಾರರು ಸ್ವಂತ ಮನೆ ಹೊಂದಲು ಸಹಕಾರ ನೀಡಬೇಕು ಎಂದ ಸಂಸದ ನಳಿನ್ ನಿಗದಿತ ಗುರಿಯನ್ನು ಆಯಾ ವರ್ಷ ಪೂರ್ಣಗೊಳಿಸಿದರೆ ಮುಂದಿನ ವರ್ಷಕ್ಕೆ ಸರಕಾರ ಮನೆಗಳನ್ನು ಮಂಜೂರು ಮಾಡಲು ಅನುಕೂಲವಾಗುತ್ತದೆ. ಪೂರ್ಣಗೊಳಿಸದೇ ಹೋದರೆ ಮುಂದಿನ ವರ್ಷದಲ್ಲಿ ಮನೆಗಳನ್ನು ವಿತರಿಸದಿರುವ ಸಾಧ್ಯತೆ ಇದೆ ಎಂದರು.

2018ರ ಜೂನ್‌ನಿಂದ ಅಕ್ಟೋಬರ್ ತನಕ ಆರೋಗ್ಯ ಕರ್ನಾಟಕ ಯೋಜನೆಯಡಿ 1,902 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಆಯುಷ್ಮಾನ್ ನೋಂದಣಿಗಾಗಿ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಒನ್, ಮೂಡಾ ಕಚೇರಿ, ಮಂಗಳೂರು ಮಹಾ ನಗರಪಾಲಿಕೆ ಮತ್ತು ಕದ್ರಿ ಮೆಸ್ಕಾಂ ಕಟ್ಟಡದಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದೆ. 2018ರ ನವೆಂಬರ್‌ನಿಂದ 2019ರ ಜನವರಿ ತನಕ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 5,339 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅದಕ್ಕಾಗಿ 6.16 ಕೋ.ರೂ. ವ್ಯಯಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆ ನೀಡಲು ಜಿಲ್ಲೆಯ 32 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಲವು ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವ ದೂರುಗಳು ಬರುತ್ತಿವೆ. ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಬೇಕು ಎಂದು ನಳಿನ್ ಸೂಚಿಸಿದರು.

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇಲ್ಲ. ಸತ್ತ ಮಂಗ, ಉಣ್ಣಿ ಮತ್ತು ಮನುಷ್ಯರಿಂದ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಿದ ಮಾದರಿಗಳ ವರದಿ ಮಂಗನ ಕಾಯಿಲೆ ಇಲ್ಲದಿರುವುದನ್ನು ದೃಢ ಪಡಿಸಿದೆ ಎಂದು ಡಾ.ರಾಮಕೃಷ್ಣ ರಾವ್ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಳೆಗಾಲದ ಬಳಿಕ ಬಿ.ಸಿ.ರೋಡ್ ಚತುಷ್ಪಥ

ಬಿ.ಸಿ.ರೋಡ್-ಅಡ್ಡಹೊಳೆ ಕಾಂಕ್ರೀಟ್ ಚತುಷ್ಪಥ ಕಾಮಗಾರಿಯನ್ನು ಮತ್ತೆ ಪ್ರಾರಂಭಿಸುವುದಾಗಿ ಎಲ್‌ಎಂಡ್‌ಟಿ ಕಂಪನಿ ಹೇಳಿದ್ದರೂ ಕೆಲವು ಕಿರುಸೇತುವೆ ಕೆಲಸವನ್ನಷ್ಟೇ ಕೈಗೊಂಡಿದೆ,.ಭೂಸ್ವಾಧೀನ ಪೂರ್ಣವಾಗದ ಕಾರಣ ಮಳೆಗಾಲದ ಬಳಿಕವಷ್ಟೇ ಹೆದ್ದಾರಿ ಕೆಲಸ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

41 ಹೆಕ್ಟೇರ್‌ನಷ್ಟು ಹೆಚ್ಚುವರಿ ಭೂಸ್ವಾಧೀನ ಆಗಬೇಕಿದೆ. ಇಲ್ಲವಾದರೆ ನಿರಂತರವಾಗಿ ಕೆಲಸ ಮಾಡಲಾಗದು. ಅಲ್ಲಲ್ಲಿ ಭಾಗಶಃ ಕೆಲಸವನ್ನಷ್ಟೇ ಮಾಡ ಬಹುದು. ಮಳೆಗಾಲದ ಮೊದಲು ಭೂಸ್ವಾಧೀನ ಮಾಡಿಕೊಡಬೇಕು. ಅಲ್ಲಿವರೆಗೆ 24 ಕಿರುಸೇತುವೆಗಳು ಹಾಗೂ 2 ಮಧ್ಯಮ ಸೇತುವೆಗಳ ಕೆಲಸ ಮಾಡಿಮುಗಿಸುತ್ತೇವೆ, ಮಳೆಗಾಲದ ನಂತರ ಹೆದ್ದಾರಿ ಕೆಲಸ ಮಾಡಲಾಗುವುದು ಎಂದು ಎಲ್‌ಆ್ಯಂಡ್‌ಟಿ ಕಂಪೆನಿಯ ಪ್ರತಿನಿಧಿ ವಿವರಿಸಿದರು.

ಸುರತ್ಕಲ್-ಬಿ.ಸಿ.ರೋಡ್ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಪೂರ್ಣಗೊಂಡಿದೆ, ಮತ್ತೆ 25 ಕಿ.ಮೀ ಡಾಮರೀಕರಣ ನಡೆಸಲಾಗುವುದು. ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಿಯಾಗಿ 6ಲೇನ್‌ನ ಹೊಸ ಸೇತುವೆ ನಿರ್ಮಾಣ ಹಾಗೂ ಹಳೆಯ ಸೇತುವೆಯನ್ನು ತೆಗೆದು ಅಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡುವ ಕಾಮಗಾರಿಗೆ ಎಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಸದ್ಯ ಡಿಪಿಆರ್ ತಯಾರಿಸಲಾಗುತ್ತಿದೆ. ಹಾಲಿ ಕೂಳೂರು ಸೇತುವೆ ಘನವಾಹನ ಸಂಚಾರಕ್ಕೆ ಅನರ್ಹವಾದ್ದರಿಂದ ಅದನ್ನು ಬಂದ್ ಮಾಡುವ ಕುರಿತು ಜಿಲ್ಲಾಡಳಿತದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.

ಮುಲ್ಕಿ-ಬಿ.ಸಿ.ರೋಡ್ ವರ್ತುಲ ರಸ್ತೆ ಕಾಮಗಾರಿಗಾಗಿ ಡಿಪಿಆರ್ ಪ್ರಗತಿಯಲ್ಲಿದೆ. 91 ಗ್ರಾಮಗಳಲ್ಲಿ ಇದು ಹಾದು ಹೋಗಲಿದ್ದು, ಭೂಸ್ವಾಧೀನಕ್ಕೆ ಶೀಘ್ರ ನೊಟೀಸ್ ನೀಡಲಾಗುವುದು.ಭಾರತ್‌ಮಾಲ ಯೋಜನೆಯಡಿ ಸುರತ್ಕಲ್-ಬಿ.ಸಿ.ರೋಡ್ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕೂ ಡಿಪಿಆರ್ ಪ್ರಗತಿಯಲ್ಲಿದೆ. ಅಲ್ಲದೆ ಕುದುರೆಮುಖ ಜಂಕ್ಷನ್‌ನಿಂದ ಬೈಕಂಪಾಡಿಯವರೆಗೆ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News