ಮಂಗಳೂರು: ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಧರಣಿ
ಮಂಗಳೂರು, ಫೆ. 25: ಬಿಎಸ್ಸೆನ್ನೆಲ್‌ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ನಾಲ್ಕೈದು ತಿಂಗಳಿನಿಂದ ಮಾಸಿಕ ವೇತನ ನೀಡದಿರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್ಸೆನ್ನೆಲ್ ಪ್ರಧಾನ ಕಚೇರಿಯ ಮುಂಭಾಗ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ ಸಿಐಟಿಯುನಿಂದ ಸೋಮವಾರ ಧರಣಿ ನಡೆಸಲಾಯಿತು.
ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯ ಕರೆಯನ್ವಯ ರಾಜ್ಯವ್ಯಾಪಿ ನಡೆದಿರುವ ಹೋರಾಟದ ಭಾಗವಾಗಿ ಈ ಧರಣಿ ಪ್ರದರ್ಶನ ನಡೆಸಲಾಯಿತು. 2018ರ ಅಕ್ಟೋಬರ್ ತಿಂಗಳಿನಿಂದ ಮಾಸಿಕ ವೇತನ ವಿತರಿಸಿಲ್ಲ. ಮಿತವ್ಯಯದ ನೆಪದಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಾಗಿ ವೇತನದ ಹಂಚಿಕೆ ಮಾಡಿ ದುಡಿಸುವುದರ ವಿರುದ್ಧವಾಗಿ ಧರಣಿ ನಡೆಸಲಾಯಿತು.
ಸಿಐಟಿಯುನ ದ.ಕ. ಜಿಲ್ಲಾ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರವು ನವ ಉದಾರೀಕರಣ ನೀತಿಯನ್ನು ತೀಕ್ಷ್ಣವಾಗಿ ಜಾರಿ ಮಾಡುತ್ತಾ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣಗೊಳಿಸಲಾಗುತ್ತಿದೆ. ಕಾರ್ಪೊರೇಟ್ ರಂಗಕ್ಕೆ ಮಾರಾಟ ಮಾಡುತ್ತಿದೆ. ಈ ನೀತಿಯ ಭಾಗವಾಗಿ ಬಿಎಸ್ಸೆನ್ನೆಲ್ ಸಂಸ್ಥೆಯು ವಿನಾಶದ ಅಂಚಿಗೆ ತಳ್ಳಲ್ಪಟ್ಟಿದೆ. ಮಾಸಿಕ ವೇತನ ನೀಡದೆ ಕಾರ್ಮಿಕರನ್ನು ದುಡಿಸುವುದು ಅಮಾನುಷ. ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಹೋರಾಟದೊಂದಿಗೆ ಸಿಐಟಿಯು ಸದಾ ಬೆಂಬಲ ನೀಡಲಿದೆ ಎಂದರು.
ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಎಲ್ಲರಿಗೂ ಉದ್ಯೋಗ ನೀಡುವ ಹಾಗೂ ಬೆಲೆ ಏರಿಕೆ ನಿಯಂತ್ರಣ ಮಾಡುವ, ಕಾರ್ಮಿಕರ ಹಿತರಕ್ಷಣೆ ಮಾಡುವ ಹುಸಿ ಭರವಸೆ ನೀಡಿ ಆಡಳಿತಕ್ಕೆ ಬಂದ ನರೇಂದ್ರ ಮೋದಿ ಸರಕಾರ ಉದ್ಯೋಗವನ್ನು ನಾಶ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಶ್ರೀಮಂತರ ಹಿತವನ್ನು ಕಾಯುತ್ತಿದೆ. ದೇಶದ ರಕ್ಷಣೆಯು ಈ ಸರಕಾರದ ಆಡಳಿತದಲ್ಲಿ ಅಪಾಯದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರ ಉದ್ಯೋಗ ಹಾಗೂ ವೇತನ ದೇಶವನ್ನು ಬಲಿಷ್ಠ ರಾಷ್ಟ್ರವಾಗಿ ಪರಿವರ್ತನೆ ಮಾಡಬಲ್ಲದು. ಕೇಂದ್ರ ಸರಕಾರ ಬಂಡವಾಳಗಾರರ ಹಿತವನ್ನು ಕಾಯುವುದು ದುರಂತ. ಗುತ್ತಿಗೆ ಕಾರ್ಮಿಕರ ಬೇಡಿಕೆಗಳು, ಕಾರ್ಮಿಕ ವರ್ಗದ ಬೇಡಿಕೆಗಳು, ಬಾಕಿ ಇರುವ ವೇತನ ಪಾವತಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಯೂನಿಯನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ, ಗುತ್ತಿಗೆ ಕಾರ್ಮಿಕರ ಹಿತರಕ್ಷಣೆ ಮಾಡುತ್ತಿರುವಂತಹ ಸಿಐಟಿಯು ಸಂಯೋಜಿತ ಸಂಘಟನೆ, ಕಾರ್ಮಿಕರ ವೇತನ ಹಾಗೂ ಕೆಲಸದ ಭದ್ರತೆಗಾಗಿ ಹೋರಾಟ ಮಾಡುತ್ತಿದೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಆಡಳಿತ ವರ್ಗ ಹಾಗೂ ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಾ ಕಾರ್ಮಿಕರ ಐಕ್ಯತೆಯನ್ನು ಒಡೆಯುತ್ತದೆ. ಈ ಬಗ್ಗೆ ಕಾರ್ಮಿಕರು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು, ಮಿತವ್ಯಯದ ಹೆಸರಿನಲ್ಲಿ ಕಾರ್ಮಿಕರ ಸಂಖ್ಯೆಯುಲ್ಲಿ ವೇತನ ಕಡಿತ ಮಾಡುವುದಕ್ಕೆ ತಮ್ಮ ಆಕ್ಷೇಪವಿದೆ. ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಮುಚ್ಚದೇ ಪ್ರೋತ್ಸಾಹಿಸಿ ಸಂಸ್ಥೆಯನ್ನು ಉಳಿಸಬೇಕು. ಪ್ರಸ್ತುತ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ಸಂಘಟಿಸಲಾಗುವುದು ಎಂದು ಅವರು ಹೇಳಿದರು.
ಉನ್ನತ ಮಟ್ಟದ ನಿಯೋಗವು ಸಂಸ್ಥೆಯ ಜನರಲ್ ಮ್ಯಾನೇಜರ್ ಮೂಲಕ ಬಿಎಸ್ಸೆನ್ನೆಲ್‌ನ ದಿಲ್ಲಿಯ ಆಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಧರಣಿನೇತೃತ್ವವನ್ನು ಸುನಿಲ್, ಹನೀಫ್, ಮೋನಪ್ಪ, ಸೀನಪ್ಪ, ಸುನಿಲ್ ಪುತ್ತೂರು, ಕಿಶೋರ್ ಕುಮಾರ್, ಗಿರೀಶ್, ವಿಜಯ್, ಭಾಸ್ಕರ್ ಮುಂತಾದವರು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಸ್ವಾಗತಿಸಿ, ವಂದಿಸಿದರು.