ಪುಲ್ವಾಮ ಭಯೋತ್ಪಾದಕ ದಾಳಿ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖೆ ಕೋರಿದ ಪಿಐಎಲ್ ತಿರಸ್ಕೃತ

Update: 2019-02-25 14:29 GMT

ಹೊಸದಿಲ್ಲಿ, ಫೆ. 25: ಪುಲ್ವಾಮ ಹಾಗೂ ಉರಿ ಭಯೋತ್ಪಾದಕ ದಾಳಿಯಲ್ಲಿ ಆಡಳಿತಾತ್ಮಕ ಪ್ರಮಾದದ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯವಾದಿ ವಿನೀತ್ ಧಂಡಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನನ್ ಅವರನ್ನು ಒಳಗೊಂಡ ಪೀಠ ತಿರಸ್ಕರಿಸಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಸೇನಾ ಪಡೆ ಮೇಲಿನ ಯಾವುದೇ ರೀತಿಯ ದಾಳಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಎರಡು ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಆಡಳಿತ, ಬೇಹುಗಾರಿಕೆ, ಸೇನೆಯೊಂದಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಧಂಡಾ ಅವರು ಫೆ. 18ರಂದು ಸಲ್ಲಿಸಿದ ಮನವಿಯಲ್ಲಿ ಕೋರಿದ್ದರು.

 ಇದುವರೆಗೆ ಪ್ರತ್ಯೇಕತವಾದಿಗಳ ವಿರುದ್ಧ ಕೈಗೊಳ್ಳಲಾದ ಕ್ರಮಗಳ ವಿವರವನ್ನು ಕೇಂದ್ರದಿಂದ ಕೋರುವಂತೆ ಕೂಡ ಮನವಿಯಲ್ಲಿ ಹೇಳಿದ್ದರು. ಪ್ರತ್ಯೇಕತಾವಾದಿಗಳ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಬೇಕು ಎಂದು ಸಲಹೆ ನೀಡಿದ್ದ ಅವರು, ಪ್ರತ್ಯೇಕತಾವಾದಿಗಳು ಚುನಾವಣೆ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸುವಂತೆ ಆಗ್ರಹಿಸಿದ್ದರು.

ಹುರಿಯತ್ ಕಾನ್ಫರೆನ್ಸ್‌ನ ನಾಯಕರಿಗೆ ನೀಡಿದ ಭದ್ರತೆಯನ್ನು ಶಾಶ್ವತವಾಗಿ ಹಿಂದೆ ತೆಗೆಯಲು ಸರಕಾರಕ್ಕೆ ಕೂಡಲೇ ಆದೇಶ ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು. ‘ಮೂರ್ತ ರೂಪದ ಪುರಾವೆ’ಗಳು ಇರುವ ಕಾನ್ಫರೆನ್ಸ್‌ನ ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಮನವಿಯಲ್ಲಿ ಧಂಡಾ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News