×
Ad

ಅಬುದಾಭಿಯ ಸ್ಪೆಶಲ್ ಒಲಿಂಪಿಕ್ಸ್‌ಗೆ ಉಡುಪಿಯ ಶುಭಂ ಆಯ್ಕೆ

Update: 2019-02-25 20:21 IST

ಉಡುಪಿ, ಫೆ.25: ಯುಎಇ ದೇಶದ ಅಬುದಾಭಿಯಲ್ಲಿ ಮಾ.14ರಿಂದ 21ರವರೆಗೆ ನಡೆಯುವ ವಿಶೇಷ ಮಕ್ಕಳ ಸ್ಪೆಶಲ್ ಒಲಿಂಪಿಕ್ಸ್‌ನಲ್ಲಿ ಉಡುಪಿ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯ ಶುಭಂ ಮನೋಜ್ ಶೆಟ್ಟಿ ಭಾರತ ವನ್ನು ಪ್ರತಿನಿಧಿಸಲಿದ್ದಾರೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಒಲಿಂಪಿಕ್ಸ್‌ನಲ್ಲಿ ಶುಭಂ, ದೇಶವನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯದ ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಗತ್ತಿನ 177 ದೇಶಗಳು ಭಾಗವಹಿಸುವ ಈ ಕ್ರೀಡಾಕೂಟ ದಲ್ಲಿ ಕರ್ನಾಟಕದಿಂದ 17 ಮಕ್ಕಳು ಪಾಲ್ಗೊಳ್ಳಲಿರುವರು ಎಂದು ಆಶಾ ನಿಲಯ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಉಡುಪಿ ಮೂಡಬೆಟ್ಟು ನಿವಾಸಿ ಮನೋಜ್ ಶೆಟ್ಟಿ ಹಾಗೂ ಚಂದ್ರಿಕಾ ದಂಪತಿ ಪುತ್ರರಾಗಿರುವ ಶುಭಂ, 2016ರಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ದಲ್ಲಿ 100 ಮೀ. ಓಟ ಮತ್ತು ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಆ ಎರಡು ವಿಭಾಗ ದಲ್ಲಿ ಚಿನ್ನ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಜಸ್ಥಾನ ದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಶುಭಂ, ಎರಡೂ ವಿಭಾಗದಲ್ಲಿ ಚಿನ್ನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಒಲಂಪಿಕ್ಸ್ ಪೂರ್ವಭಾವಿ ತಯಾರಿಯು ಮಾ.1ರಿಂದ 7ರವರೆಗೆ ದೆಹಲಿ ಯಲ್ಲಿ ನಡೆಯಲಿದ್ದು, ಅದರಲ್ಲಿ ಭಾಗವಹಿಸಿದ ತಂಡವು ಮಾ.8ರಂದು ಅಬು ದಾಭಿಗೆ ತೆರಳಲಿದೆ. ಒಲಂಪಿಕ್ಸ್‌ನಲ್ಲಿ ಶುಭಂ, 18-21ವರ್ಷ ವಯೋಮಿತಿಯ 100 ಮೀಟರ್ ಓಟ ಮತ್ತು ಶಾಟ್‌ಪುಟ್ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮತಿಯ ಕಾರ್ಯದರ್ಶಿ ಸ್ಟೀಫನ್ ಕರ್ಕಡ, ಉಡುಪಿ ಪ್ರಾದೇಶಿಕ ಪರಿಷತಿನ ವಲಯಾಧ್ಯಕ್ಷ ರೆ.ಸ್ಟೀವನ್ ಸರ್ವೊತ್ತಮ ಬಂಗೇರ, ಆಶಾ ನಿಲಯದ ವಾರ್ಡನ್ ಪ್ರಸನ್ನಿ ಸೋನ್ಸ್, ಶಶಿಕಲಾ ಕೋಟ್ಯಾನ್, ಶುಭಂ, ತಾಯಿ ಚಂದ್ರಿಕಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News