×
Ad

ಕರ್ನಾಟಕದಲ್ಲಿ ಗಾಂಧೀಜಿಯ 12 ವಿಶೇಷ ಅಂಚೆ ಲಕೋಟೆ ಬಿಡುಗಡೆ

Update: 2019-02-25 20:48 IST

ಉಡುಪಿ, ಫೆ.22: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು 1934ರ ಫೆ.25ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸ್ಮರಣಾರ್ಥ ಅಂಚೆ ಇಲಾಖೆ ಹೊರತಂದ ಗಾಂಧಿ ವಿಶೇಷ ಅಂಚೆ ಲಕೋಟೆಯನ್ನು ಸೋಮವಾರ ಬೆಂಗಳೂರಿನ ಕರ್ನಾಟಕ ವೃತ್ತದ ಪ್ರಧಾನ ಪೋಸ್ಟ್‌ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ ಬಿಡುಗಡೆಗೊಳಿಸಿದರು.

ಮಣಿಪಾಲದ ಮಾಹೆ ವಿವಿಯ ಕೌನ್ಸಿಲಿಂಗ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಸಹಕಾರದಿಂದ 85 ವರ್ಷಗಳ ಹಿಂದೆ ಇದೇ ದಿನ ಮಹಾತ್ಮ ಗಾಂಧಿ ಉಡುಪಿ ಜಿಲ್ಲೆಗೆ ನೀಡಿದ ಭೇಟಿ ಹಾಗೂ 1949ರಲ್ಲಿ ಉಡುಪಿಯಲ್ಲಿ ಡಾ.ಟಿಎಂಎ ಪೈ ಅವರಿಂದ ಸ್ಥಾಪನೆಗೊಂಡ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಸ್ಮರಣಾರ್ಥ ಈ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಚಾರ್ಲ್ಸ್ ಲೋಬೊ, ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನೋತ್ಸವವೂ ಇದಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತವು ಗಾಂಧೀಜಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭಗಳ ನೆನಪಿಸಿಗೆ ಒಟ್ಟು 12 ವಿಶೇಷ ಅಂಚೆ ಕವರ್‌ಗಳನ್ನು ಬಿಡುಗಡೆಗೊಳಿಸುತ್ತಿದೆ ಎಂದರು.

1934ರ ಫೆ.24ರಂದು ಮಹಾತ್ಮ ಗಾಂಧಿ ಅವರು ಮಂಗಳೂರಿಗೆ ನೀಡಿದ ಭೇಟಿಯಲ್ಲಿ ಪಾನನಿರೋಧಕ್ಕೆ ಒತ್ತು ನೀಡಿದ್ದರೆ, ಮರುದಿನ ಫೆ.25ರಂದು ಮೊದಲ ಬಾರಿ ಉಡುಪಿಗೆ ನೀಡಿದ ಭೇಟಿಯಲ್ಲಿ ಅಸ್ಪಶ್ಯತೆಗೆ ವಿಶೇಷ ಒತ್ತು ನೀಡಿ ಮಾತನಾಡಿದ್ದರು ಎಂದರು. ಡಾ.ಲೋಬೊ ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಗಾಂಧೀಜಿ ಮಾಡಿದ ಭಾಷಣವನ್ನೂ ಲಭ್ಯವಿರುವ ಅಂದಿನ ದಾಖಲೆಗಳ ಮೂಲಕ ಓದಿ ಹೇಳಿದರು.

ಗಾಂಧಿ ಅಂದು ಅಜ್ಜರಕಾಡಿನಲ್ಲಿ ಮಾಡಿದ ಭಾಷಣವನ್ನು ಇಂದೇನಾದರೂ ಮಾಡಿದ್ದರೆ, ಆತನ ಮೇಲೆ ಹಲ್ಲೆ ನಡೆದು ಹೋಗುತ್ತಿತ್ತು. ಚಿತ್ರನಟರಾದ ನಾಸಿರುದ್ದೀನ್‌ಶಾ ಅಥವಾ ಅಮೀರ್ ಖಾನ್‌ಗಾದ ಸ್ಥಿತಿ ಅವರಿಗಾಗುತ್ತಿತ್ತು ಎಂದು ಡಾ.ಚಾರ್ಲ್ಸ್ ಲೋಬೊ ನುಡಿದರು.

ಕಾರ್ಯಕ್ರಮದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ರಿಜಿಸ್ಟ್ರಾರ್ ಹಾಗೂ ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಪ್ರೊ ವೈಸ್ ಚಾನ್ಸಲರ್ ಡಾ.ಪಿಎಲ್‌ಎನ್‌ಜಿ ರಾವ್, ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಉಡುಪಿ ಅಂಚೆ ಇಲಾಖೆಯ ಸುಪರಿಂಟೆಂಡೆಂಟ್ ರಾಜಶೇಖರ್ ಭಟ್ ಉಪಸ್ಥಿತರಿದ್ದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪಿ.ಎಲ್.ಎನ್.ಜಿ.ರಾವ್ ಸ್ವಾಗತಿಸಿದರೆ, ಮಣಿಪಾಲ ಅಂಚೆಚೀಟಿ ಹಾಗೂ ನಾಣ್ಯಸಂಗ್ರಹಕರ ಕ್ಲಬ್‌ನ ಸದಸ್ಯ ಹಾಗೂ ಯುರೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ಜೋಸೆಫ್ ಥಾಮಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಗಾಂಧಿ ನೋಬೆಲ್ ಬಹುಮಾನ ಪಡೆಯದಿದ್ದರೂ ವಿಶ್ವದಲ್ಲಿ ಅಮರರಾಗಿ ಉಳಿದಿದ್ದಾರೆ. 100ಕ್ಕೂ ಅಧಿಕ ದೇಶಗಳು ಗಾಂಧೀಜಿ ಅವರ ಸ್ಟಾಂಪ್‌ಗಳನ್ನು ಬಿಡುಗಡೆಗೊಳಿಸಿವೆ. ಅಮೆರಿಕ ಗಾಂಧಿ ಸ್ಟಾಂಪ್ ಬಿಡುಗಡೆಗೊಳಿಸಿದ ಮೊದಲ ದೇಶವಾಗಿದೆ. ವಿಶ್ವದಲ್ಲಿ ಗಾಂಧಿ ಬಗ್ಗೆ 350ಕ್ಕೂ ಅಧಿಕ ಸ್ಟಾಂಪ್‌ಗಳು ಬಿಡುಗಡೆಯಾವಿದೆ ಎಂದರು. ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರೆ, ಡಾ.ವಿದ್ಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

1934ರ ಫೆ.25ರಂದು ಉಡುಪಿಯಲ್ಲಿ ಗಾಂಧಿ ಭಾಷಣದ ಮುಖ್ಯಾಂಶ

ಅಂದು ಶ್ರೀಕೃಷ್ಣ ಮಠದಲ್ಲಿದ್ದ ಅಸ್ಪಶ್ಯತಾ ಆಚರಣೆ ಹಾಗೂ ದಲಿತರಿಗೆ ದೇವಸ್ಥಾನ ಪ್ರವೇಶ ನಿಷಿದ್ಧವನ್ನು ಗಾಂಧೀಜಿ ತಮ್ಮ ಭಾಷಣದಲ್ಲಿ ಕಟುವಾಗಿ ಟೀಕಿಸಿದ್ದರು. ‘ಉಡುಪಿಯ ಸೌಂದರ್ಯದ ಕುರಿತು ಬಹಳಷ್ಟು ಮಂದಿ ನನಗೆ ವಿವರಿಸಿದ್ದಾರೆ. ಅಲ್ಲದೇ ಇಲ್ಲಿರುವ ಪ್ರಸಿದ್ಧ ದೇವಸ್ಥಾನದ ಬಗ್ಗೆಯೂ. ಇಲ್ಲಿ ದೇವರು ಹರಿಜನರಿಗೆ (ದಲಿತರು) ತನ್ನ ಬಳಿ ಬರಲು ಬಿಡದ ಬ್ರಾಹ್ಮಣರಿಂದ ಮುಖ ತಿರುಗಿಸಿ ನಿಂತ ಬಗ್ಗೆಯೂ ಹೇಳಿದ್ದಾರೆ.

‘ಈಗ ಇಲ್ಲಿನ ದೇವಸ್ಥಾನ ಹರಿಜನರಿಗೆ ಪ್ರವೇಶ ನೀಡದಿರುವುದರ ವಿರುದ್ಧ ಬಲವಾದ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿ ಅವರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ನಾನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಅಭಿಪ್ರಾಯಗಳನ್ನು ಅತ್ಯಂತ ಸೌಮ್ಯ ರೀತಿಯಲ್ಲಿ ರೂಪಿಸಬೇಕು ಎಂಬುದು ನನ್ನ ಆಶಯವಾಗಿದೆ.’ ಎಂದು ಗಾಂಧೀಜಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ಹರಿಜನರಿಗೂ ದೇವಸ್ಥಾನಕ್ಕೆ ಪ್ರವೇಶ ನೀಡುವುದು ಸ್ವಶುದ್ಧೀಕರಣದ ಒಂದು ಭಾಗ ಹಾಗೂ ಹರಿಜನರಿಗೆ ನೀಡುವ ಪರಿಹಾರವಾಗಿದೆ. ನೀವು ನೀಡುವ ಆಶ್ವಾಸನೆಗಳಿಗೆ ಬದ್ಧರಾಗಿರುವಿರಾದರೆ, ಉಡುಪಿಯಲ್ಲಿ ಹರಿಜನರ ಚಟುವಟಿಕೆ ಗಳು ದ್ವಿಗುಣಗೊಳ್ಳಬೇಕೆಂದು ನಾನು ನಿರೀಕ್ಷಿಸುತ್ತೇನೆ. ಈ ಮೂಲಕ ಕರ್ನಾಟಕದ ಉಳಿದ ಪ್ರದೇಶಗಳಿಗೆ ಉಡುಪಿ ಮಾದರಿಯಾಗಬೇಕು ಎಂದು ಗಾಂಧೀಜಿ ಹೇಳಿದ್ದರು.

ಇಡೀ ಭಾರತದ ನಾಗರಿಕರು ತಮ್ಮ ಮನಸ್ಸಿನಿಂದ ಅಸ್ಪಶ್ಯತೆ ಎಂಬ ಪಾಪವನ್ನು ಕಿತ್ತೊಗೆಯುವುದಕ್ಕಿಂದ ಉತ್ತಮವಾದ ಇನ್ನೊಂದು ಕಾರ್ಯವನ್ನು ನಾನು ಊಹಿಸಲೂ ಸಾಧ್ಯವಿಲ್ಲ. ನಾವೆಲ್ಲರೂ ಒಂದೇ ಮತ್ತು ಅದೇ ದೇವರ ಮಕ್ಕಳು. ತನ್ನ ಮಕ್ಕಳಲ್ಲಿ ತಾರತಮ್ಯವನ್ನು ತೋರುವ ನ್ಯಾಯ ದೇವತೆ ದೇವರಾಗಿರಲು ಸಾಧ್ಯವೇ ಇಲ್ಲ. ಆದುದರಿಂದ ನಾನು ನೀಡುವ ಅಸ್ಪಶ್ಯತಾ ವಿರೋಧಿ ಸಂದೇಶವೆಂದರೆ ಅದು ಮನುಷ್ಯನಲ್ಲಿ ಸಹೋದರತ್ವದ ಭಾವನೆ ಜಾಗೃತಗೊಳಿಸುವ ಸಂದೇಶವೇ ಆಗಿದೆ. ಹೀಗಾಗಿ ನಮ್ಮ ನಮ್ಮ ಹೃದಯದಲ್ಲಿರುವ ಅಸ್ಪಶ್ಯತೆಯ ಭಾವನೆಯನ್ನು ಶುದ್ಧೀಕರಿಸೋಣ ಅಂದರೆ ಮೇಲು-ಕೀಳು ಎಂಬ ಭಾವನೆ ತೊರೆಯೋಣ.’ ಎಂಬುದು 1934ರ ಫೆ.25ರಂದು ಗಾಂಧೀಜಿ ಉಡುಪಿಯಲ್ಲಿ ನೀಡಿದ ಸಂದೇಶವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News