ಪ್ರಾರ್ಥಿಸುವ ಮೂಲಭೂತ ಹಕ್ಕು ಕೋರಿ ಸುಪ್ರೀಂ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ

Update: 2019-02-25 15:35 GMT

ಹೊಸದಿಲ್ಲಿ, ಫೆ. 25: ಅಯೋಧ್ಯೆಯಲ್ಲಿರುವ ವಿವಾದಿತ ರಾಮಮಂದಿರ ನಿವೇಶನದಲ್ಲಿ ಆರಾಧಿಸುವ ಮೂಲಭೂತ ಹಕ್ಕನ್ನು ಜಾರಿಗೊಳಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

 ಅಯೋಧ್ಯೆಯ ಮುಖ್ಯ ಪ್ರಕರಣ ವಿಚಾರಣೆ ನಡೆಯಲಿರುವ ಬುಧವಾರ ನ್ಯಾಯಾಲಯದಲ್ಲಿ ಹಾಜರಿರುವಂತೆ ಸ್ವಾಮಿ ಅವರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನನ್ ಅವರನ್ನು ಒಳಗೊಂಡ ಪೀಠ ತಿಳಿಸಿದೆ.

ಈ ಮನವಿಯ ತುರ್ತು ವಿಚಾರಣೆ ನಡೆಸುವಂತೆ ಹೇಳಿರುವ ಸ್ವಾಮಿ, ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ಕೂಡ ಕೋರಿದ್ದಾರೆ. ಆದಾಗ್ಯೂ, ಮುಖ್ಯ ನ್ಯಾಯಮೂರ್ತಿ, ‘‘ನೀವು ನಾಳೆ ಹಾಜರಾಗಿ. ನಾವು ನೋಡೋಣ’’ ಎಂದು ಹೇಳಿದ್ದಾರೆ.

 ಕಳೆದ ವರ್ಷ ಅಯೋಧ್ಯೆ ಭೂ ಒಡೆತನ ವಿವಾದದಲ್ಲಿ ಮಧ್ಯೆ ಪ್ರವೇಶಿಸಲು ಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿರಲಿಲ್ಲ. ಮೂಲ ದಾವೆದಾರರು ಮಾತ್ರ ವಾದ ಮಂಡಿಸಬಹುದು ಎಂದು ಅದು ಸ್ಪಷ್ಟಪಡಿಸಿತ್ತು.

   ಈ ವಿಷಯದಲ್ಲಿ ಮದ್ಯೆ ಪ್ರವೇಶಿಸಲು ಆಗ್ರಹಿಸದೆ, ರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಆರಾಧಿಸುವ ಮೂಲಭೂತ ಹಕ್ಕನ್ನು ಜಾರಿಗೊಳಿಸುವಂತೆ ಕೋರಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿರುವುದರಿಂದ ಸ್ವಾಮಿ ಅವರ ಪ್ರತಿಪಾದನೆಯನ್ನು ಪೀಠ ಪರಿಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News