×
Ad

ಉಡುಪಿ: ಇನ್ನೆರಡು ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆ

Update: 2019-02-25 21:53 IST

ಉಡುಪಿ, ಫೆ. 25: ಕಂಡ್ಲೂರು ಹಾಗೂ ಗೋಳಿಹೊಳೆಗಳಲ್ಲಿ ಪತ್ತೆಯಾದ ಮಂಗಗಳ ಕಳೇಬರಗಳಲ್ಲಿ ಮಂಗನಕಾಯಿಲೆಗೆ ಕಾರಣವಾಗುವ ವೈರಸ್ ಪತ್ತೆಯಾಗಿದ್ದು, ಈ ಮೂಲಕ ಜ.9ರ ಬಳಿಕ ಜಿಲ್ಲೆಯಲ್ಲಿ ಸತ್ತ ಮಂಗಗಳಲ್ಲಿ 14ರ ದೇಹಗಳಲ್ಲಿ ಈ ವೈರಸ್ ಪತ್ತೆಯಾದಂತಾಗಿದೆ. ಜ.19ರ ಬಳಿಕ ಕೇವಲ ಎರಡು ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದಂತಾಗಿದೆ.

ಜಿಲ್ಲೆಯಲ್ಲಿ ಈವರೆಗೆ 64 ಸತ್ತ ಮಂಗಗಳ ಅಟಾಪ್ಸಿ ನಡೆಸಲಾಗಿದ್ದು, ಇವುಗಳಲ್ಲಿ 14ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ 47ರಲ್ಲಿಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. ಇನ್ನು ಮೂರರ ವರದಿ ಬರಬೇಕಾಗಿದೆ.

ರವಿವಾರ ಜಿಲ್ಲೆಯ ಉಡುಪಿ ತಾಲೂಕು ಬಾರಕೂರಿನ ಉದ್ದಲಗುಡ್ಡೆಯಲ್ಲಿ ಹಾಗೂ ಕರ್ಜೆಯಲ್ಲಿ ಎರಡು ಸತ್ತ ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ ಬಾರಕೂರಿನಲ್ಲಿ ಸಿಕ್ಕ ಮಂಗನ ಅಟಾಪ್ಸಿ ನಡೆಸಲಾಗಿತ್ತು. ಇಂದು ಜಿಲ್ಲೆಯಲ್ಲಿ ಯಾವುದೇ ಸತ್ತ ಮಂಗ ಪತ್ತೆಯಾಗಿಲ್ಲ. ಶಂಕಿತ ಸೋಂಕಿಗಾಗಿ ಜಿಲ್ಲೆಯಲ್ಲಿ 47 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಯಾರಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಮಂಗನಕಾಯಿಲೆ ಕುರಿತಂತೆ ಜನಜಾಗೃತಿ ಕಾರ್ಯಕ್ರಮ ಮುಂದುವರಿದಿದ್ದು, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಇಂದು 2336 ಮನೆಗಳಿಗೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಿದ್ದಾರೆ.ಈವರೆಗೆ 1,06,046 ಮನೆಗಳಿಗೆ ಇವರು ಭೇಟಿ ನೀಡಿ ಸರ್ವೆ ನಡೆಸಿದ್ದಾರೆ.

ಇಂದು ಸಹ ಕುಂದಾಪುರದ ಅಜ್ರಿ, ಕಾರ್ಕಳದ ಪಳ್ಳಿ, ನಿಟ್ಟೆ ಗ್ರಾಪಂಗಳಲ್ಲಿ ಮಂಗನ ಕಾಯಿಲೆ ಕುರಿತ ಗ್ರಾಮಸಭೆಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News