ಸಜ್ಜನ್ ಕುಮಾರ್ ಮನವಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಸಂಜೀವ್ ಖನ್ನಾ

Update: 2019-02-25 16:30 GMT

ಹೊಸದಿಲ್ಲಿ, ಫೆ.25: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ತನಗೆ ದಿಲ್ಲಿ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಮಾಜಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ. ಸಂಜೀವ್ ಖನ್ನಾ ಹಿಂದೆ ಸರಿದಿದ್ದಾರೆ.

 ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ನಡೆಸುತ್ತಿದೆ. 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ದಿಲ್ಲಿಯಲ್ಲಿ ಸಿಖ್ ವಿರೋಧಿ ದಂಗೆ ನಡೆದಿತ್ತು. ದಿಲ್ಲಿ ಕಂಟೋನ್ಮೆಂಟ್‌ನ ರಾಜ್‌ನಗರ ಪಾರ್ಟ್-1 ಪ್ರದೇಶದಲ್ಲಿ ನಡೆದಿದ್ದ ಗಲಭೆಯಲ್ಲಿ ಐವರು ಮೃತಪಟ್ಟಿದ್ದು, ಈ ದಾಳಿಗೆ ಸಜ್ಜನ್‌ಕುಮಾರ್ ನೇತೃತ್ವ ವಹಿಸಿದ್ದರು ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ 2018ರ ಡಿಸೆಂಬರ್ 17ರಂದು ಸಜ್ಜನ್ ಕಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಅದರಂತೆ ಡಿ.31ರಂದು ನ್ಯಾಯಾಲಯದೆದುರು ಶರಣಾಗಿರುವ ಸಜ್ಜನ್ ಕುಮಾರ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News