ಪುಲ್ವಾಮ ದಾಳಿಯ ಹಿಂದೆ ಪಾಕ್ ಕೈವಾಡಕ್ಕೆ ಸ್ಪಷ್ಟ ಪುರಾವೆ: ಎನ್‌ಐಎ

Update: 2019-02-25 16:33 GMT

ಹೊಸದಿಲ್ಲಿ, ಫೆ.25: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮಹತ್ವದ ಪ್ರಗತಿ ಸಾಧಿಸಿದ್ದು, ಈ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಸ್ಪಷ್ಟ ಪುರಾವೆ ಸಂಗ್ರಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಭೀಕರ ದಾಳಿಯನ್ನು ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ ಸೇರಿದಂತೆ ಜೈಷೆ ಮುಹಮ್ಮದ್(ಜೆಇಎಂ) ಸಂಘಟನೆ ಐದು ಅಥವಾ ಆರು ಉಗ್ರರು ಮತ್ತು ಇವರಿಗೆ ನೆರವು ನೀಡಿರುವ ಸ್ಥಳೀಯ ವ್ಯಕ್ತಿ ಸೇರಿ ಯೋಜಿಸಿರುವುದು ತನಿಖೆಯಿಂದ ದೃಢಪಟ್ಟಿದೆ. ಅಲ್ಲದೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಯೋಧರ ವಾಹನಗಳಿಗೆ ಢಿಕ್ಕಿಯಾದ ಮಾರುತಿ ಈಕೊ ಕಾರಿನ ಮಾಲಕರನ್ನು ಗುರುತಿಸಲಾಗಿದೆ. ಈ ಕಾರನ್ನು ಸುಮಾರು 8 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನೋಂದಣಿ ಮಾಡಲಾಗಿದ್ದು, ಮಾಲಕನ ಒಪ್ಪಿಗೆ ಪಡೆದು ಉಗ್ರರ ತಂಡ ಈ ಕಾರನ್ನು ಬಳಸುತ್ತಿತ್ತು . ಇದಕ್ಕೂ ಮುನ್ನ ಉಗ್ರರ ತಂಡ ಈ ಕಾರನ್ನು ಹಲವು ಬಾರಿ ಬಳಸಿದೆ . ಕಾರಿನ ಕುರಿತ ಸಂಪೂರ್ಣ ಮಾಹಿತಿ ದೊರೆತಿದೆ . ಮಾಲಕ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

 ಕಾರಿನಲ್ಲಿ ಸುಮಾರು 25 ಕಿ.ಗ್ರಾಂನಷ್ಟು ಆರ್‌ಡಿಎಕ್ಸ್ ತುಂಬಿಸಿಡಲಾಗಿತ್ತು. ಇಷ್ಟು ಪ್ರಮಾಣದ ಆರ್‌ಡಿಎಕ್ಸ್ ಅನ್ನು ಉಗ್ರರು ಎಲ್ಲಿಂದ ಪಡೆದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಗಡಿಯಾಚೆಗಿಂದ ಇದನ್ನು ದೇಶದೊಳಗೆ ಸಾಗಿಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾರ್ ಮಾರ್ಚ್‌ನಲ್ಲಿ ನಾಪತ್ತೆಯಾಗಿದ್ದು ಅದಕ್ಕೂ ಮೊದಲು ಜೆಇಎಂ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ. 2018ರ ಜೂನ್‌ನಲ್ಲಿ ಕಾಕಪೋರ ಗ್ರಾಮದಲ್ಲಿರುವ ದಾರ್‌ನ ಮನೆಗೆ ಭದ್ರತಾ ಪಡೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು ಮತ್ತು ಈ ಘಟನೆಯ ಬಳಿಕ ದಾರ್ ಭದ್ರತಾ ಪಡೆಗಳ ಕುರಿತು ಆಕ್ರೋಶಗೊಂಡಿದ್ದ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News