ಜಪ್ತಿ ಮಾಡಿರುವ ದಾಖಲೆಪತ್ರದ ಪ್ರತಿಯನ್ನು ವಾದ್ರಾಗೆ ನೀಡಲು ಸೂಚನೆ
ಹೊಸದಿಲ್ಲಿ, ಫೆ.25: ಹಣ ಅಕ್ರಮ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಉದ್ಯಮಿ ರಾಬರ್ಟ್ ವಾದ್ರಾರ ಕಚೇರಿ ಮೇಲೆ ದಾಳಿ ನಡೆಸಿದಾಗ ಜಪ್ತಿ ಮಾಡಿರುವ ದಾಖಲೆಗಳ ಪ್ರತಿಯನ್ನು ಅವರಿಗೆ ಒದಗಿಸುವಂತೆ ದಿಲ್ಲಿಯ ನ್ಯಾಯಾಲಯ ಸೋಮವಾರ ಇಡಿಗೆ ಸೂಚಿಸಿದೆ.
ವಿದೇಶದಲ್ಲಿ ಅಕ್ರಮ ಆಸ್ತಿ ಖರೀದಿಸಿರುವ ಹಾಗೂ ರಾಜಸ್ತಾನದ ಬಿಕಾನೇರ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಆಸ್ತಿ ಹಗರಣದಲ್ಲಿ ವಾದ್ರಾರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಇಡಿ ಅಧಿಕಾರಿಗಳು ತನ್ನ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿರುವ ದಾಖಲೆ ಪತ್ರದ ಆಧಾರದಲ್ಲಿ ತನ್ನನ್ನು ವಿಚಾರಣೆ ನಡೆಸುತ್ತಿರುವ ಕಾರಣ ಆ ದಾಖಲೆ ಪತ್ರಗಳ ಪ್ರತಿಯನ್ನು ತನಗೆ ನೀಡುವಂತೆ ಆದೇಶಿಸಬೇಕೆಂದು ವಾದ್ರಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್, ದಾಖಲೆ ಪತ್ರಗಳ ಪ್ರತಿಯನ್ನು ಒದಗಿಸುವಂತೆ ಇಡಿಗೆ ಸೂಚಿಸಿದರು.