ಬುಲೆಟ್ ಬೈಕ್ ಕಳವು: ಅಪ್ರಾಪ್ತ ವಶಕ್ಕೆ

Update: 2019-02-25 17:04 GMT

ಮಂಗಳೂರು, ಫೆ.25: ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಕಳುವುಗೈದ ಆರೋಪದಲ್ಲಿ ಅಪ್ರಾಪ್ತ ಬಾಲಕನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದು, ಲಕ್ಷಾಂತರ ಮೌಲ್ಯದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಮಂಜೇಶ್ವರ ಮೂಲದ ಅಪ್ರಾಪ್ತ ಬಾಲಕ ಬೈಕ್ ಕಳವು ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 1.65 ಲಕ್ಷ ರೂ. ಮೌಲ್ಯದ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.

ಅಪ್ರಾಪ್ತ ಆರೋಪಿಯು ಸುಲಭದಲ್ಲಿ ಹಣಗಳಿಸುವ ಉದ್ದೇಶದಿಂದ ಫೆ. 15ರಂದು ಕಂಕನಾಡಿ ಹಳೆಯ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್‌ನಿಂದ ಬುಲೆಟ್ ಬೈಕ್‌ನ್ನು ಕಳವುಗೈದಿದ್ದ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಕಳವುಗೈದ ಬೈಕ್‌ನ್ನು ಮಾರಾಟ ಮಾಡಲು ಮಂಗಳೂರಿಗೆ ತೆಗೆದುಕೊಂಡು ಬಂದ ಸಮಯ ನಗರದ ನಂತೂರು ಬಳಿ ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕದ್ರಿ ಪೊಲೀಸ್ ಠಾಣಾ ನಿರೀಕ್ಷಕ ಮಾರುತಿ ಜಿ. ನಾಯಕ ಹಾಗೂ ಸಿಬ್ಬಂದಿಯಾದ ವೆಂಕಟೇಶ್, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ರಾಘವೇಂದ್ರ, ಸುರೇಂದ್ರ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News