ಎರಡನೇ ಬಾರಿ ರಸ್ತೆಗೆ ಗುದ್ದಲಿ ಪೂಜೆ: ಕಾಂಗ್ರೆಸ್ ಕಾರ್ಯಕರ್ತರಿಂದ ಕರಿ ಬಾವುಟ ಪ್ರದರ್ಶನ

Update: 2019-02-25 17:15 GMT

ಪಡುಬಿದ್ರೆ, ಫೆ. 25 : 2 ಕೋಟಿ ರೂ. ವೆಚ್ಚದ ಮುದರಂಗಡಿ -ಜಂತ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎರಡನೇ ಬಾರಿ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕರಿಬಾವುಟ ಪ್ರದರ್ಶಿಸ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.

2018ರ ಮಾ.18ರಂದು ಈ ರಸ್ತೆಗೆ ಅಂದಿನ ಶಾಸಕ ವಿನಯ ಕುಮಾರ್ ಸೊರಕೆ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಈ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ.  ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ 2018 ಜುಲೈ 20ರಂದು ಒಪ್ಪಿಗೆ ಪತ್ರವನ್ನು ಇಲಾಖೆಗೆ ಸಲ್ಲಿಸಿದ್ದರು.

ಗುದ್ದಲಿ ಪೂಜೆಗೆ ಆಗಮಿಸಿದ ಶಾಸಕರನ್ನು ಪ್ರಶ್ನಿಸಿದ ತಾಲ್ಲೂಕು ಪಂ. ಸದಸ್ಯ ಮೈಕೆಲ್ ಡಿಸೋಜ, ಹಿಂದೆಯೇ ಕಾಮಗಾರಿಗೆ ಟೆಂಡರ್ ಆಗಿದೆ. ಗುದ್ದಲಿ ಪೂಜೆಯನ್ನೂ ನೆರವೇರಿಸಲಾಗಿದೆ ಎಂದು ವಾಗ್ವಾದ ನಡೆಸಿದರು. ಬಳಿಕ ಶಾಸಕರು ಗುದ್ದಲಿ ಪೂಜೆಗೆ ಮುಂದಾದಾಗ ಕರಿ ಪತಾಕೆ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಾಲಾರಂಭಿಸಿದರು. ಬಿಜೆಪಿ ಕಾರ್ಯಕರ್ತರು ಮೋದಿ ಹಾಗೂ ಶಾಸಕ ಲಾಲಾಜಿ ಪರ ಜೈಕಾರದೊಂದಿಗೆ ಕಾಂಗ್ರೆಸ್‍ಗೆ ಧಿಕ್ಕಾರ ಹಾಕಿದರು. ಶಾಸಕರು ಗುದ್ದಲಿ ಪೂಜೆಯನ್ನು ನೇರವೇರಿಸಿದರು. ಶಾಸಕರು ಗುದ್ದಲಿ ಪೂಜೆ ನಡೆಸುವ ಬಗ್ಗೆ ಬಿಜೆಪಿಗರು ಅಳವಡಿಸಿದ್ದ ಹೋರ್ಡಿಂಗ್‍ಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಯೋಜನೆ ಮಂಜೂರು ಮಾಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಅಭಿನಂದನೆ ಹೋರ್ಡಿಂಗ್‍ಗಳನ್ನು ಸ್ಥಳದಲ್ಲಿ ಅಳವಡಿಸಿದ್ದರು.

ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಟೆಂಡರ್ ಅಂತಿಮವಾಗದೆ ಕಾಮಗಾರಿಗೆ ತರಾತುರಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದರಿಂದ ಗೊಂದಲಗಳಾಗಿವೆ. ಕಾಮಗಾರಿ ಮಂಜೂರಾದರೂ ಶಾಸಕರ ಒಪ್ಪಿಗೆ ಪತ್ರ ಪಡೆದು ಇದೀಗ ಟೆಂಡರ್ ಅಂತಿಮವಾಗಿದೆ. ಆದರಂತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ. ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

ಮುದರಂಗಡಿ ಗ್ರಾಮ ಪಂ. ಅಧ್ಯಕ್ಷ ಡೇವಿಡ್ ಡಿಸೋಜ, ಸದಸ್ಯ ಶಿವರಾಮ ಭಂಡಾರಿ, ಪ್ರಮುಖರಾದ  ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮುರಲೀಧರ ಪೈ, ರವೀಂದ್ರ ಪ್ರಭು, ಹರಿಣಾಕ್ಷ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News