ಅದು ಚುನಾವಣಾ ರ‍್ಯಾಲಿಯಲ್ಲ: ಮೋದಿಗೆ ಕಾಂಗ್ರೆಸ್ ತರಾಟೆ
ಹೊಸದಿಲ್ಲಿ, ಫೆ. 25: ರಾಷ್ಟ್ರೀಯ ಯುದ್ಧ ಸ್ಮಾರಕ ಉದ್ಘಾಟನೆಯ ಸಂದರ್ಭದ ಭಾಷಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಈ ಕಾರ್ಯಕ್ರಮವನ್ನು ಮೋದಿ ಚುನಾವಣಾ ರ‍್ಯಾಲಿಯಾಗಿ ಪರಿವರ್ತಿಸಿದ್ದಾರೆ ಎಂದಿದ್ದಾರೆ.
ವಿವಿಧ ಯುದ್ಧಗಳಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸಲಾದ ಯುದ್ಧ ಸ್ಮಾರಕ ಉದ್ಘಾಟಿಸಿದ ಮೋದಿ, ಬೋಫೋರ್ಸ್‌ನಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಒಪ್ಪಂದದ ವರೆಗೆ ಎಲ್ಲ ಹಗರಣಗಳ ತನಿಖೆ ಒಂದು ಕುಟುಂಬವನ್ನು ಕೇಂದ್ರೀಕರಿಸಿದೆ. ಈಗ ಇದೇ ಜನರು ದೇಶಕ್ಕೆ ರಫೇಲ್ ಯುದ್ಧ ವಿಮಾನಗಳು ಆಗಮಿಸದಂತೆ ತಡೆಯಲು ಶ್ರಮಿಸುತ್ತಿದ್ದಾರೆ ಎಂದಿದ್ದರು.
ಕಾಂಗ್ರೆಸ್ ಸರಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದ ಮೋದಿ, ಹಿಂದಿನ ಸರಕಾರದ ವಿಫಲತೆಯಿಂದಾಗಿ ದೇಶದಲ್ಲಿ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣವಾಗಲು 7 ದಶಕಗಳು ಬೇಕಾಯಿತು ಎಂದು ಹೇಳಿದ್ದರು.
ಮೋದಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಟ್ವಿಟ್ಟರ್‌ನಲ್ಲಿ, ‘‘ನಮ್ಮ ಯೋಧರ ಬಲಿದಾನ ಹಾಗೂ ಶೌರ್ಯವನ್ನು ನೆನಪಿಸುವ ಈ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಗೌರವ, ಘನತೆ ಇದೆ. ಆದರೆ, ತನ್ನ ವೈಯಕ್ತಿಕತೆ, ರಾಜಕೀಯ ಹಾಗೂ ಮತಗಳ ಹೊರತಾಗಿ ಆಲೋಚಿಸದ ಮೋದಿ ಅದನ್ನು ನಾಶ ಮಾಡಿದರು.’’ ಎಂದಿದ್ದಾರೆ.