ಮಹಿಳಾ ಕಾಂಗ್ರೆಸ್‌ನಿಂದ ‘ಮಹಿಳಾ ಅಧಿಕಾರ ಯಾತ್ರೆ’: ರಾಜಕೀಯ ಸ್ಥಾನಮಾನ ಕುರಿತು ಮೀಸಲಾತಿಗೆ ಆಗ್ರಹ
ಮಂಗಳೂರು, ಫೆ.26: ರಾಜಕೀಯದಲ್ಲಿ ಮಹಿಳಾ ಸ್ಥಾನಮಾನದ ಮೀಸಲಾತಿಗೆ ಆಗ್ರಹಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಿಂದ ‘ಮಹಿಳಾ ಅಧಿಕಾರ ಯಾತ್ರೆ’ ಆರಂಭಿಸಿ, ಮಲ್ಲಿಕಟ್ಟೆ-ಕದ್ರಿ ಮೈದಾನದವರೆಗೆ ಮಾನವ ಸರಪಳಿ ನಿರ್ಮಿಸಲಾಯಿತು.
ಮಹಿಳಾ ಕಾಂಗ್ರೆಸ್‌ನಿಂದ ‘ಮಹಿಳಾ ಅಧಿಕಾರ ಯಾತ್ರೆ’ಗೆ ಸಚಿವ ಯು.ಟಿ.ಖಾದರ್ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಚಾಲನೆ ನೀಡಿದರು.
ಇದಕ್ಕೆ ಮೊದಲು ಮಾತನಾಡಿದ ಕರ್ನಾಟಕ ಪ್ರಾದೇಶಿಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ದೇಶದಲ್ಲಿ ಮಹಿಳೆಯರು ಇಂದು ಅರ್ಧದಷ್ಟು ಇದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯವಾಗಿ ಇನ್ನು ಕೂಡ ಸಮಾನ ಅವಕಾಶಗಳು ದೊರೆತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಪೊರೇಶನ್, ಗ್ರಾಮ ಪಂಚಾಯತ್, ಪಪಂ, ತಾಪಂ, ಜಿಪಂ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ನಿಂದ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 100 ದಿನಗಳಲ್ಲಿ ಮೀಸಲಾತಿ ನೀಡುವುದಾಗಿ ವಾಗ್ದಾನ ನೀಡಿತ್ತು.ಆದರೆ ಇಲ್ಲಿಯವರೆಗೆ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಸ್ತ್ರೀಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹೆಚ್ಚು ರಾಜಕೀಯವಾಗಿ ಅಧಿಕಾರ ಕೊಟ್ಟರೆ ದೇಶವನ್ನು ಅಭಿವೃದ್ಧಿ ಮಾಡಲು ಅವಕಾಶವಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಮಹಿಳಾ ಕಾಂಗ್ರೆಸ್‌ನಿಂದ ಈಗ ಬೃಹತ್ ಆಂದೋಲನವೇ ಆರಂಭವಾಗಿದೆ. ಈ ಬಗ್ಗೆ ಬೀದಿಗಿಳಿದು ನಮ್ಮ ಹಕ್ಕುಗಳ ಬಗ್ಗೆ ಹೋರಾಟ ಮಾಡಲಾಗುವುದು. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎನ್ನುವುದು ಉಲ್ಲೇಖವಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ರಾಜಕಾರಣಿಗಳು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದು ಅವರು ಒತ್ತಾಯಿಸಿದರು.
ಮಹಿಳಾ ಅಧಿಕಾರ ಯಾತ್ರೆಯ ನೇತೃತ್ವವನ್ನು ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ, ಎಐಎಂಸಿ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರಾ ರೆಡ್ಡಿ, ಜೆನೆಟ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ ಸದಸ್ಯೆ ಮಮತಾ ಗಟ್ಟಿ, ಲಾವಣ್ಯ ಬಳ್ಳಾಲ್, ಮಾಜಿ ಮೇಯರ್ ಕವಿತಾ ಸನೀಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ, ಬ್ಲಾಕ್ ಅಧ್ಯಕ್ಷೆ ನಮಿತಾ ಡಿ.ರಾವ್, ಎಸ್.ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.