ಕುಂದಾಪುರ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ
ಉಡುಪಿ, ಫೆ.26: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಅವರು ಕುಂದಾಪುರದ ಸಹಾಯಕ ಕಮೀಷನರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಬಿಎಲ್‌ಓಗಳೊಂದಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಮತಗಟ್ಟೆಗಳಿಗೆ ರವಿವಾರ ಭೇಟಿ ನೀಡಿ ಅಲ್ಲಿರುವ ಮೂಲಭೂತ ಸೌಕರ್ಯಗಳ ಪರಿಶೀಲನ ನಡೆಸಿದರು.
ಕುಂದಾಪುರ ಜೂನಿಯರ್ ಕಾಲೇಜಿನ ಮತಗಟ್ಟೆ ಸಂಖ್ಯೆ 9-10, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 180, 181 ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಕುದ್ರುಗೆ ಭೇಟಿ ನೀಡಿ ಮತಗಟ್ಟೆಯಲ್ಲಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ರ್ಯಾಂಪ್, ಶೌಚಾಲಯ ಇವುಗಳನ್ನು ಪರಿಶೀಲಿಸಿದರು.
ಅಲ್ಲದೇ ಮಿಂಚಿನ ನೊಂದಣಿ ಬಗ್ಗೆ ಸೂಕ್ತವಾದ ಬ್ಯಾನರ್‌ಗಳನ್ನು ಅಳವಡಿಸಿ ಪ್ರಚಾರ ಕೈಗೊಳ್ಳುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು ಎಂದು ಪ್ರಕಟಣೆ ತಿಳಿಸಿದೆ.