ದೇಶವು ಸುರಕ್ಷಿತ ಕೈಗಳಲ್ಲಿದೆ: ಪ್ರಧಾನಿ ಮೋದಿ

Update: 2019-02-26 14:56 GMT

ಚುರು(ರಾಜಸ್ಥಾನ),ಫೆ.26: ದೇಶವು ಸುರಕ್ಷಿತ ಕೈಗಳಲ್ಲಿದೆ ಮತ್ತು ದೇಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನದಲ್ಲಿಯ ಭಯೋತ್ಪಾದಕರ ಶಿಬಿರಗಳ ಮೇಲೆ ವಾಯುದಾಳಿಯ ಬಳಿಕ ಮಾಡಿದ ಮೊದಲ ಸಾರ್ವಜನಿಕ ಭಾಷಣದಲ್ಲಿ ಘೋಷಿಸಿದರು.

ದೇಶವು ತಲೆ ಬಾಗಲು ತಾನು ಅವಕಾಶ ನೀಡುವುದಿಲ್ಲ ಎಂದೂ ಅವರು ಹೇಳಿದರು.

ಇಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,‘‘2014ರಲ್ಲಿ ನಾನೇನು ಹೇಳಿದ್ದೆನೋ ಅದನ್ನೇ ಇಂದು ಪುನರುಚ್ಚರಿಸುತ್ತಿದ್ದೇನೆ. ಈ ನೆಲದ ಆಣೆ,ನನ್ನ ದೇಶವು ನಾಶವಾಗಲು ನಾನು ಬಿಡುವುದಿಲ್ಲ. ಈ ದೇಶವನ್ನು ನಿಲ್ಲಲು ಬಿಡುವುದಿಲ್ಲ. ದೇಶವು ತಲೆ ಬಾಗಲು ನಾನು ಅವಕಾಶವನ್ನು ನೀಡುವುದಿಲ್ಲ ’’ ಎಂದು ಹೇಳಿದರು.

ಆದರೆ ಪ್ರಧಾನಿ ತನ್ನ ಭಾಷಣದಲ್ಲಿ ವಾಯುದಾಳಿಯನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ.

ಪಕ್ಷವು ವ್ಯಕ್ತಿಗಳಿಗಿಂತ ದೊಡ್ಡದು ಮತ್ತು ದೇಶವು ಪಕ್ಷಕ್ಕಿಂತ ದೊಡ್ಡದು,ಹೀಗಾಗಿ ಪ್ರಧಾನ ಸೇವಕನಾಗಿರುವ ನಾನು ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ದೇಶದ ಜನತೆಗೆ ಸೇವೆ ಮಾಡಬೇಕೆಂಬ ಮನೋಭಾವನೆಯೊಂದಿಗೆ ನಾವು ಶ್ರಮಿಸುತ್ತಿದ್ದೇವೆ ಎಂದ ಮೋದಿ,‘ಜೈ ಜವಾನ್,ಜೈ ಕಿಸಾನ್ ಮತ್ತು ಜೈ ವಿಜ್ಞಾನ್ ’ಎಂಬ ಭಾವನೆಯೊಂದಿಗೆ ದೇಶವು ಮುನ್ನಡೆಯುತ್ತಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯನ್ನು ಪ್ರಸ್ತಾಪಿಸಿದ ಅವರು 2,000 ರೂ.ಗಳ ಮೊದಲ ಕಂತನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದರು.

ರಾಜ್ಯದಲ್ಲಿಯ ಕಾಂಗ್ರೆಸ್ ಸರಕಾರದ ವಿರುದ್ಧ ದಾಳಿ ನಡೆಸಿದ ಅವರು,ಕೇಂದ್ರವು ರೈತರಿಗೆ ಒದಗಿಸುತ್ತಿರುವ ಲಾಭಗಳಿಗೆ ರಾಜಸ್ಥಾನ ಸರಕಾರವು ತಡೆಯೊಡ್ಡುತ್ತಿರುವುದರಿಂದ ದುರದೃಷ್ಟವಶಾತ್ ಫಲಾನುಭವಿಗಳಲ್ಲಿ ಚುರುವಿನ ಒಬ್ಬನೇ ಒಬ್ಬ ರೈತನಿಲ್ಲ. ಕೇಂದ್ರವು ಆರಂಭಿಸಿರುವ ಯೋಜನೆಗಾಗಿ ರೈತರ ಪಟ್ಟಿಯನ್ನು ರಾಜಸ್ಥಾನವು ಒದಗಿಸಿಲ್ಲ. ಬಡವರು ಮತ್ತು ರೈತರ ಏಳಿಗೆ ಕೇಂದ್ರದ ಆದ್ಯತೆಯಾಗಿದೆ,ಆದರೆ ಅವರಿಗಾಗಿರುವ ಯೋಜನೆಗಳು ರಾಜಕೀಯದ ಸುಳಿವಿಗೆ ಸಿಲುಕಿದಾಗ ನೋವುಂಟಾಗುತ್ತದೆ ಎಂದರು.

ತನ್ನ ಸರಕಾರವು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ನೀತಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News