ಅಯೋಧ್ಯೆ ಜಮೀನು ಹಕ್ಕು: ಮಧ್ಯಸ್ಥಿಕೆ ತೀರ್ಪು ಮಾರ್ಚ್ 5ಕ್ಕೆ
ಹೊಸದಿಲ್ಲಿ,ಫೆ.26: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಕಾನೂನು ಹೋರಾಟವನ್ನು ಎಂಟು ವಾರಗಳ ಮಟ್ಟಿಗೆ ಮಧ್ಯಸ್ಥಿಕೆಗೆ ಕಳುಹಿಸಲು ಭಾರತೀಯ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಚಿಂತಿಸಿದೆ.
ನ್ಯಾಯಾಲಯದ ನಿಗಾದಲ್ಲಿ ನಡೆಯುವ ಮಧ್ಯಸ್ಥಿಕೆಯಲ್ಲಿ ಅಯೋಧ್ಯೆ ಭೂಹಕ್ಕಿನ ವಿಚಾರವನ್ನು ಮುಸ್ಲಿಂ ಮತ್ತು ಹಿಂದು ಗುಂಪುಗಳು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ಬಗ್ಗೆ ನ್ಯಾಯಪೀಠ ಮಂಗಳವಾರ ಸಲಹೆ ನೀಡಿದೆ. ಇದೇ ವೇಳೆ ಕಳೆದ ಒಂಬತ್ತು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿಯಾಗಿರುವ ಈ ಪ್ರಕರಣದ ಅಂತಿಮ ವಿಚಾರಣೆಯ ಸಿದ್ಧತೆಯನ್ನೂ ಶ್ರೇಷ್ಠ ನ್ಯಾಯಾಲಯ ಮಾಡುತ್ತಿದೆ.
ನ್ಯಾಯಾಲಯದ ಮಧ್ಯಸ್ಥಿಕೆಯ ಸಲಹೆಯನ್ನು ಉತ್ತರ ಪ್ರದೇಶ ಸರಕಾರ ಮತ್ತು ರಾಮ ಲಲ್ಲಾ ಪರ ವಕೀಲ ಹಿರಿಯ ನ್ಯಾಯವಾದಿ ಸಿ.ಎಸ್ ವೈದ್ಯನಾಥನ್ ತಿರಸ್ಕರಿಸಿದ್ದರೆ ಮನವಿದಾರರಲ್ಲಿ ಒಂದಾಗಿರುವ ನಿರ್ಮೋಹಿ ಅಖಾಡ ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ.
ಇದು ಕೇವಲ ಜಮೀನು ಹಕ್ಕಿನ ವಿವಾದವಲ್ಲ ಅಥವಾ ಖಾಸಗಿ ಸೊತ್ತಿನ ಹಕ್ಕಿನ ವಿವಾದವಲ್ಲ. ಆದರೆ ಸಾರ್ವಜನಿಕರ ಪೂಜಿಸುವ ಹಕ್ಕಿಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಯಾವ ಹಂತದಲ್ಲೂ ಮಧ್ಯಸ್ಥಿಕೆಗೆ ಅವಕಾಶ ನೀಡಿರಲಿಲ್ಲ. ಹಾಗಾಗಿಯೇ ನಾವು ನಾಗರಿಕ ಪ್ರಕ್ರಿಯೆ ಸಂಹಿತೆಯ ವಿಧಿ89ರ ಅಡಿಯಲ್ಲಿ ಪರ್ಯಾಯ ಪರಿಹಾರ ವಿಧಾನವನ್ನು ಅಳವಡಿಸಿಕೊಳ್ಳಲು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ನ್ಯಾಯಾಲಯ ವೈದ್ಯನಾಥನ್ ಅವರನ್ನು ಉದ್ದೇಶಿಸಿ ತಿಳಿಸಿತು.
ನ್ಯಾಯಾಲಯ ಸಲಹೆಯನ್ನು ತಿರಸ್ಕರಿಸಿರುವುದನ್ನು ಪರಿಗಣಿಸದ ನ್ಯಾಯಪೀಠ, ಯಾವುದೇ ರೀತಿಯ ಆಕ್ಷೇಪಗಳನ್ನು ಬದಿಗೊತ್ತಿ ಒಂದು ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅಧಿಕಾರವನ್ನು ವಿಧಿ89 ನ್ಯಾಯಾಲಯಕ್ಕೆ ನೀಡುತ್ತದೆ ಎಂದು ನ್ಯಾಯಪೀಠ ತಿಳಿಸಿತು. ಇದೇ ವೇಳೆ ಈ ವಿವಾದವನ್ನು ಮಧ್ಯಸ್ಥಿಕೆಗೆ ಕಳುಹಿಸುವ ಕುರಿತು ಮಾರ್ಚ್ 5ರಂದು ನಿರ್ಧರಿಸಲಾಗುವುದು ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ತಿಳಿಸಿದ್ದಾರೆ.