ನೀರವ್ ಮೋದಿಯ 147 ಕೋಟಿ ರೂ. ಆಸ್ತಿ ಜಪ್ತಿ
ಹೊಸದಿಲ್ಲಿ,ಫೆ.26: ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿಗೆ ಸೇರಿದ 147.72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಜಪ್ತಿ ಮಾಡಿದೆ. ಜಪ್ತಿ ಮಾಡಲಾದ ಸ್ಥಿರ ಮತ್ತು ಚರ ಆಸ್ತಿಗಳು ಮುಂಬೈ ಮತ್ತು ಸೂರತ್‌ನಲ್ಲಿದ್ದು, ಇವುಗಳ ಒಟ್ಟು ವೌಲ್ಯ 147,72,86,651 ರೂ. ಆಗಿದೆ. ಇವುಗಳಲ್ಲಿ ಎಂಟು ಕಾರುಗಳು, ಕಾರ್ಖಾನೆ ಮತ್ತು ಯಂತ್ರಗಳು, ಆಭರಣಗಳು, ಚಿತ್ರಕಲೆ ಮತ್ತು ಕಟ್ಟಡಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆಸ್ತಿಗಳು, ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ಬಾಕಿಯಿರಿಸಿರುವ ಆರೋಪಿ ನೀರವ್ ಮೋದಿಗೆ ಮತ್ತು ಅವರ ಕಂಪೆನಿಗಳಿಗೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರವ್ ಮೋದಿ ಮಾಲಕತ್ವದ ಸೋಲಾರ್ ಎಕ್ಸ್‌ಪೋರ್ಟ್ಸ್, ಸ್ಟೆಲ್ಲರ್ ಡೈಮಂಡ್ಸ್ ಮತ್ತು ಡೈಮಂಡ್ಸ್ ರಸ್ ಹೆಸರಲ್ಲಿ ಪಿಎನ್‌ಬಿ ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ನೀರವ್ ಮೋದಿ ಮತ್ತು ಅವರ ಸಂಬಂಧಿಕರ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಸಿಬಿಐ ದಾಖಲಿಸಿದ ದೂರಿನ ಆಧಾರದಲ್ಲಿ ಕಳೆದ ವರ್ಷ ಫೆಬ್ರವರಿ 15ರಂದು ಪಿಎಂಎಲ್‌ಎಯಡಿ ಜಾರಿ ನಿರ್ದೇಶನಾಲಯ ನೀರವ್ ಮೋದಿ ವಿರುದ್ಧ ಹಣ ವಂಚನೆ ಪ್ರಕರಣ ದಾಖಲಿಸಿಕೊಂಡಿತ್ತು. ನೀರವ್ ಮೋದಿ ಹಾಗೂ ಇತರರು ಕೆಲವು ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಸರಿಯಾದ ಪ್ರಕ್ರಿಯೆ ನಡೆಸದೆ ಒಪ್ಪಿಗೆ ಪತ್ರವನ್ನು ಪಡೆದು ಪಿಎನ್‌ಬಿಯಿಂದ ಸಾಲಪಡೆದು ಮರುಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.