ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: 50 ಪ್ರದೇಶಗಳಲ್ಲಿ ಭಾರೀ ಶೆಲ್, ಗುಂಡಿನ ದಾಳಿ

Update: 2019-02-26 17:06 GMT

ಶ್ರೀನಗರ, ಫೆ. 26: ಪಾಕಿಸ್ತಾನ ಸೇನಾ ಪಡೆ ಜಮ್ಮುಕಾಶ್ಮೀರ ಗಡಿ ನಿಯಂತ್ರಣ ರೇಖೆಯ 50ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಮೋರ್ಟಾರ್ ಶೆಲ್‌ಗಳನ್ನು ಸಿಡಿಸುವ ಹಾಗೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ. ಭಾರತದ ಸೇನಾ ಪಡೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.

ಗಡಿನಿಯಂತ್ರಣ ರೇಖೆಯ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಸಂಘಟನೆಯ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ ದೊಡ್ಡ ಸಂಖ್ಯೆಯ ಉಗ್ರರು ಹತರಾದ ಗಂಟೆಗಳ ಬಳಿಕ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು, ರಾಜೌರಿ ಹಾಗೂ ಪೂಂಛ್ ಜಿಲ್ಲೆಯಲ್ಲಿರುವ ಮುಂಚೂಣಿ ಠಾಣೆ ಹಾಗೂ 55 ನಾಗರಿಕರ ಸಣ್ಣ ಹಳ್ಳಿಯನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆ ಸಂಜೆ 5.30ರ ಹೊತ್ತಿಗೆ ಭಾರೀ ಶಸ್ತ್ರಾಸ್ತ್ರ ಹಾಗೂ 120 ಎಂಎಂ ಮೋರ್ಟಾರ್‌ಗಳಿಂದ ದಾಳಿ ನಡೆಸಿತು ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ, ಬಾಲಕೋಟೆ, ಖಾರಿ ಕರ್ಮರಾ, ಮಾಂಕೋಟೆ, ತರ್ಕುಂಡಿ, ರಾಜೌರಿ ಜಿಲ್ಲೆಯ ಕಲಾಲ್, ಬಾಬಾ ಖೋರಿ, ಕಲ್ಸಿಯನ್, ಲಾಮ್ ಹಾಗೂ ಝಂಗಾರ್, ಜಮ್ಮುವಿನ ಪಲ್ಲನ್ವಾಲಾ, ಲಾಲೇಯಾಲಿ ಸೇರಿದಂತೆ ಹಲವು ವಲಯಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ. ಕದನ ವಿರಾಮ ಉಲ್ಲಂಘನೆಯಿಂದ ಪ್ರಾಣ ಹಾನಿ ಹಾಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಭಾರತೀಯ ಸೇನೆ ಪ್ರತಿದಾಳಿ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News