ಉಡುಪಿ: ಮತ್ತೆ ಮೂರು ಮಂಗಗಳ ಸಾವು
ಉಡುಪಿ, ಫೆ. 26: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮೂರು ಮಂಗಗಳ ಕಳೇಬರ ಪತ್ತೆಯಾಗಿವೆ. ಮೂರು ಉಡುಪಿ ತಾಲೂಕಿನಲ್ಲೇ ಕಂಡುಬಂದಿದೆ. ಮಣಿಪುರದ ಚರ್ಚ್ ಬಳಿ, ಮಂದಾರ್ತಿಯ ನಡೂರಿನಲ್ಲಿ ಹಾಗೂ ಪೇತ್ರಿಯ ಕನ್ನಾರಿನಲ್ಲಿ ಇವು ಸಿಕ್ಕಿದ್ದು, ಇವುಗಳಲ್ಲಿ ಮಣಿಪುರದಲ್ಲಿ ಪತ್ತೆಯಾದ ಮಂಗನ ಪೋಸ್ಟ್‌ಮಾರ್ಟಂ ನಡೆಸಿ ಪರೀಕ್ಷೆಗಾಗಿ ಶಿವಮೊಗ್ಗ ಮತ್ತು ಮಣಿಪಾಲದ ಪ್ರಯೋಗಾಲಯಗಲಿಗೆ ಕಳುಹಿಸಲಾಗಿದೆ.
ಇಂದು ಶಂಕಿತ ಮಂಗನಕಾಯಿಲೆಗಾಗಿ ಮೂವರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಇಬ್ಬರ ಪರೀಕ್ಷಾ ವರದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಇನ್ನೊಬ್ಬರ ವರದಿಯನ್ನು ಕಾಯಲಾಗುತ್ತಿದೆ. ಈವರೆಗೆ 50 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, 49 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ, ಒಬ್ಬರ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಆರೋಗ್ಯ ಕಾರ್ಯಕರ್ತೆಯರು 1596 ಮನೆಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿದ್ದು, ಇದುವರೆಗೆ 1,07,615 ಮನೆಗಳಿಗೆ ಭೇಟಿ ನೀಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.