×
Ad

ಮಲ್ಪೆ: ಪರ್ಸಿನ್ ಬೋಟುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2019-02-26 21:48 IST

ಮಲ್ಪೆ, ಫೆ. 26: ಮತ್ತೆ ಕಾನೂನು ಉಲ್ಲಂಘಿಸಿ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿರುವ ಪರ್ಸಿನ್ ಬೋಟುಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಮಲ್ಪೆ ಆಳಸಮುದ್ರ ಮತ್ತು ನಾಡದೋಣಿ ಮೀನುಗಾರರು ಮಂಗಳವಾರ ಮಲ್ಪೆ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

 ರಾಜ್ಯ ಮತ್ತು ಕೇಂದ್ರ ಸರಕಾರದ ಆದೇಶ ಹಾಗೂ ಉಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪುನ್ನು ಉಲ್ಲಂಸಿ ಪರ್ಸೀನ್ ಮೀನುಗಾರರು ಕಾನೂನಿಗೆ ವಿರುದ್ದವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರ ವಿರುದ್ದ ಕ್ರಮ ತೆಗೆದುಕೊಂಡು ದೂರು ದಾಖಲಿಸಬೇಕೆಂದು ಮೀನುಗಾರರು ಆಗ್ರಹಿಸಿದರು.

ಉಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಸಿ ಕೆಲವೊಂದು ದೋಣಿ ಗಳು ಜನರೇಟರ್ ಅಳವಡಿಸಿ ಮೀನುಗಾರಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ದೋಣಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಲ್ಪೆ ಪೊಲೀಸ್ ಠಾಣೆ ಮತ್ತು ಕರಾವಳಿ ಕಾವಲು ಪಡೆಗೆ ಲಿಖಿತ ಆದೇಶ ನೀಡಲಾಗಿದೆ ಎಂದು ಮೀನು ಗಾರಿಕೆ ಉಪನಿರ್ದೇಶಕ ಪಾರ್ಶ್ವನಾಥ್ ಈ ಸಂದರ್ಭದಲ್ಲಿ ತಿಳಿಸಿದರು.

ಮೀನುಗಾರ ಮುಖಂಡರಾದ ಚಂದ್ರಕಾಂತ್ ಕರ್ಕೇರ, ಕರುಣಾಕರ ಸಾಲ್ಯಾನ್, ವಿಠಲ ಕರ್ಕೇರ, ಆನಂದ ಅಮೀನ್, ದಯಾನಂದ ಕುಂದರ್, ದಯಾನಂದ ಕೆ.ಸುವರ್ಣ, ತಿಮ್ಮ ಮರಕಾಲ ಶಂಕರ ಸಾಲ್ಯಾನ್, ಭುವನೇಶ್ ಕೋಟ್ಯಾನ್, ಮಹೇಶ್ ಸುವರ್ಣ, ಸುಭಾಸ್ ಮೆಂಡನ್, ಮಿಥುನ್ ಕರ್ಕೇರ, ಹರೀಶ್ ಜಿ.ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಫೆ.27ರಿಂದ ಅನಿರ್ದಿಷ್ಟಾವಧಿ ಮುಷ್ಕರ

ಅವೈಜ್ಞಾನಿಕ ಮೀನುಗಾರಿಕೆ ನಡೆಸುವವರ ವಿರುದ್ಧ ಮೀನುಗಾರಿಕೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಲ್ಪೆ ಆಳಸಮುದ್ರ ಟ್ರಾಲ್‌ ಬೋಟ್ ಮೀನುಗಾರರ ಸಂಘದ ನೇತೃತ್ವದಲ್ಲಿ ಫೆ. 27ರಿಂದ ಮಲ್ಪೆಯಲ್ಲಿ ಅಳಸಮುದ್ರ ಮೀನುಗಾರಿಕೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News