ವಾಯುದಾಳಿಗೆ ಪ್ರತಿಪಕ್ಷಗಳ ಒಕ್ಕೊರಲಿನ ಬೆಂಬಲ
ಹೊಸದಿಲ್ಲಿ, ಪೆ. 26: ಇಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ ಭಾರತೀಯ ವಾಯು ಪಡೆ ನಡೆಸಿದ ವಾಯು ದಾಳಿಗೆ ಪ್ರತಿಪಕ್ಷಗಳು ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿವೆ.
ಗಡಿ ನಿಯಂತ್ರಣ ರೇಖೆಯ ಬಾಲಕೋಟ್‌ನಲ್ಲಿ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯ ಬಗ್ಗೆ ಕೇಂದ್ರ ಸರಕಾರ ಮಂಗಳವಾರ ಪ್ರತಿ ಪಕ್ಷಗಳಿಗೆ ಮಾಹಿತಿ ನೀಡಿತು. ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಸರಕಾರಕ್ಕೆ ಹಾಗೂ ಭದ್ರತಾ ಪಡೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ಭವನದಲ್ಲಿ ಆಯೋಜಿಸಲಾಗಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಕ್ಷಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ವಿಜಯ್ ಗೋಯಲ್, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಉಮರ್ ಅಬ್ದುಲ್ಲಾ ಮೊದಲಾದವರು ಪಾಲ್ಗೊಂಡಿದ್ದರು. ಸರ್ವ ಪಕ್ಷಗಳು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗೆ ಸರಕಾರಕ್ಕೆ ಒಕ್ಕೊರಲಿನ ಬೆಂಬಲ ನೀಡಿರುವುದು ಹಾಗೂ ಭದ್ರತಾ ಪಡೆಯನ್ನು ಶ್ಲಾಘಿಸಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.