'ಅರಣ್ಯವಾಸಿಗಳ ರಕ್ಷಣೆಗೆ ಸುಗ್ರಿವಾಜ್ಞೆ ಹೊರಡಿಸಲು ಆಗ್ರಹ'
ಮಂಗಳೂರು, ಫೆ. 26: ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಆದಿವಾಸಿ ಮತ್ತು ಅರಣ್ಯವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟು ಆದೇಶ ಮಾಡಿದೆ. ಸುಪ್ರೀಂಕೋರ್ಟಿನ ಈ ಆದೇಶಕ್ಕೆ ಸರಕಾರದ ನಿರ್ಲಕ್ಷ ಮತ್ತು ಕೋರ್ಟಿಗೆ ಕೇಂದ್ರ ಸರಕಾರ ನೀಡಿದ ತಪ್ಪು ಮಾಹಿತಿಯೇ ಕಾರಣ ಎಂದು ಕಮ್ಯುನಿಸ್ಟ್ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಕಾಯ್ದೆ ತಿದ್ದುಪಡಿ ಆಧಾರದಲ್ಲಿ ಈ ಆದಿವಾಸಿಗಳಿಗೆ ಮತ್ತು ಅರಣ್ಯ ವಾಸಿಗಳಿಗೆ ಭೂಮಿಯ ಹಕ್ಕು ಪತ್ರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಫಲತೆಯಿಂದ ಸುಪ್ರೀಂ ಕೋರ್ಟಿನ ಈ ಆದೇಶದ ಜಾರಿಯಾದಾಗ ಏನೂ ತಪ್ಪು ಮಾಡದೆ ಅನಾದಿಕಾಲದಿಂದ ವಾಸಿಸುತ್ತಾ ಜೀವನ ಸಾಗಿಸುತ್ತಿರುವ ಆದಿವಾಸಿಗಳನ್ನು ಮತ್ತು ಅರಣ್ಯ ವಾಸಿಗಳನ್ನು ಬೀದಿಗೆ ತಳ್ಳುವಂತಾದೀತು. ಈ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ನರೇಂದ್ರ ಮೋದಿ ಸರಕಾರ ವಿಳಂಬ ಮಾಡದೆ ಆದಿವಾಸಿಗಳ ಮತ್ತು ಪಾರಂಪರಿಕ ಅರಣ್ಯವಾಸಿಗಳ ಒಕ್ಕಲೆಬ್ಬಿಸುವುದನ್ನು ತಡೆಯಲು ಹಾಗೂ ಅರಣ್ಯವಾಸಿಗಳ ರಕ್ಷಣೆಗೆ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅರಣ್ಯವಾಸಿಗಳು ತಮ್ಮ ಸ್ವಾಧೀನದ ಭೂಮಿಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸರಕಾರದ ಉದಾಸೀನತೆಯಿಂದ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಮಾತ್ರವಲ್ಲ ಹೆಚ್ಚಿನವರ ಅರ್ಜಿಗಳನ್ನು ತನಿಖೆ ನಡೆಸದೆ ತಿರಸ್ಕರಿಸಲಾಗಿದೆ. ಅರಣ್ಯಹಕ್ಕು ಕಾಯ್ದೆಯಡಿ ಅವಕಾಶ ಇರುವ ಎಲ್ಲಾ ಅರಣ್ಯವಾಸಿಗಳಿಗೆ ಸಮುದಾಯ ಹಕ್ಕನ್ನು ನೀಡದೆ ನಿರ್ಲಕ್ಷಿಸಿದ್ದು, ಸರಕಾರದ ಅಕ್ಷಮ್ಯವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯಾಗುವಾಗ ನಿರ್ಣಾಯಕ ದಿನಾಂಕಗಳಲ್ಲಿ ಕೇಂದ್ರ ಸರಕಾರದ ಕಾನೂನು ಸಲಹೆಗಾರರು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿರುವುದರಿಂದ, ಸಂಬಂದ ಪಟ್ಟ ಸಚಿವಾಲಯ ಅರಣ್ಯ ಹಕ್ಕುಗಳ ಕಾಯ್ದೆಯ ವಿರುದ್ಧದ ದಾವೆದಾರರ ಜೊತೆ ಶಾಮೀಲಾಗಿರುವುದರಿಂದ ಈ ಅಪಾಯಕಾರಿ ಆದೇಶ ಬರಲು ಕಾರಣ ಎಂದು ಬಿ.ಎಂ.ಭಟ್ ಟೀಕಿಸಿದರು.