ಫೆ.27: ಆಕಾಶವಾಣಿಯ 14ನೇ ಗ್ರಾಮವಾಸ್ತವ್ಯ ‘ಮರವಂತೆ’ ಗ್ರಾಮದ ನುಡಿಚಿತ್ರ ಪ್ರಸಾರ
ಮಂಗಳೂರು, ಫೆ. 26: ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಬಿತ್ತರಗೊಳ್ಳುವ ಬಾನುಲಿ ಗ್ರಾಮಾಯಣ ಗ್ರಾಮವಾಸ್ತವ್ಯದ 14ನೆಯ ಸಂಚಿಕೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಮರವಂತೆ ಗ್ರಾಮದ ನುಡಿಚಿತ್ರವು ಫೆ. 27ರಂದು ಬೆಳಗ್ಗೆ 9:15ಕ್ಕೆ ಪ್ರಸಾರವಾಗಲಿದೆ.
ಮರವಂತೆ ಗ್ರಾಮವು ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವಾರು ಪುರಸ್ಕಾರಗಳಿಗೆ ಪಾತ್ರವಾಗಿ ಮಾದರಿಯಾಗಿದೆ. ಜೀವ ವೈವಿಧ್ಯ ಅಧ್ಯಯನ, ಸ್ವಚ್ಛತಾ ಅಭಿಯಾನದಲ್ಲಿ ಮಾದರಿಯಾಗಿದ್ದು ಪ್ರವಾಸಿ ತಾಣವಾಗಿ ಬೆಳೆದು ನಿಂತ ಗ್ರಾಮವಿದು. ಈ ಗ್ರಾಮದಲ್ಲಿ ಡಾ.ಪಿ. ದಯಾನಂದ ಪೈ ಕೊಡುಗೆಯ ಪಂಚಾಯತ್ ಕಟ್ಟಡ, ಸುಸಜ್ಜಿತ ರಸ್ತೆ, ಘನ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ಹಲವು ರೀತಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಆಕಾಶವಾಣಿ ತಂಡವು ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಧ್ವನಿ ದಾಖಲಿಸಿ ನುಡಿಚಿತ್ರ ತಯಾರಿಸಲಾಗಿದೆ.
ಪಂಚಾಯತ್‌ನ ಹಿರಿಯರಾದ ಜನಾರ್ದನ ಎಸ್. ಮರವಂತೆ, ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಗಣೇಶ್ ಮರವಂತೆ, ಶಂಕರ ಖಾರ್ವಿ, ಪ್ರಕಾಶ ಪಡಿಯಾರ್, ದೇವದಾಸ್ ಮರವಂತೆ, ಎಂ.ಎ. ಖಾನ್ ಸಹಿತ ಹಲವರು ಆಕಾಶವಾಣಿ ಜೊತೆ ಮಾತನಾಡಿದ್ದಾರೆ.
ಗ್ರಾಮದ ನೈಜ ಸ್ವರೂಪ, ಅಭಿವೃದ್ಧಿಯ ಹೆಜ್ಜೆಗಳು, ಶೈಕ್ಷಣಿಕ, ಸಾರ್ವಜನಿಕ ಹಾಗೂ ಜಾನಪದ ರಂಗದ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುವ ವಿಶೇಷ ನುಡಿಚಿತ್ರ ಇದಾಗಿದ್ದು ಇತರ ಗ್ರಾಮಗಳಿಗೂ ಅನುಕರಣೀಯವಾಗಿದೆ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಕಾರ್ಯಕ್ರಮ ನಿರ್ಮಾಣ ಮಾಡಿದ್ದು ಅಕ್ಷತಾ ರಾಜ್ ಧ್ವನಿ ನೀಡಿದ್ದಾರೆ.