ಎಪಿಕ್- ಆಧಾರ್ ಜೋಡಣೆ: ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರು ಮಾಯ !
ಹೊಸದಿಲ್ಲಿ,ಫೆ.26: ಚುನಾವಣಾ ಆಯೋಗವು 2015ರಲ್ಲಿ ಕೈಗೆತ್ತಿಕೊಂಡಿದ್ದ ಮತದಾರರ ಭಾವಚಿತ್ರ ಗುರುತು ಚೀಟಿ(ಎಪಿಕ್) ಮತ್ತು ಆಧಾರ್ ಜೋಡಣೆಯಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಮತದಾರರ ಪಟ್ಟಿಗಳಿಂದ ಸುಮಾರು 55 ಲಕ್ಷ ಮತದಾರರ ಹೆಸರುಗಳು ಬಿಟ್ಟುಹೋಗಿವೆ. ಕಡ್ಡಾಯ ಮನೆ ಮನೆ ದೃಢೀಕರಣವನ್ನು ನಡೆಸದೆ ಈ ಹೆಸರುಗಳನ್ನು ಕೈಬಿಡಲಾಗಿದೆ ಎನ್ನುವುದು ಡಾಟಾ ತಜ್ಞರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಉತ್ತರವು ಬಹಿರಂಗಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಮತದಾರರ ಹೆಸರು ರದ್ದು ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಜಿಒ ಸ್ವೇಚ್ಛಾ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಕೈಬಿಡಲಾಗಿರುವ ಎಲ್ಲ ಮತದಾರರ ವಿವರಗಳನ್ನು ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಸೋಮವಾರ ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಕಿರಣ ಚಂದ್ರ ಅವರು,ಆಧಾರ್-ಎಪಿಕ್ ಜೋಡಣೆಗೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ನಡೆಸಲಾಗಿದ್ದ ಎಲ್ಲ ಪ್ರಾಯೋಗಿಕ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸುವಂತೆ ಆಯೋಗವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರ ಅವರೊಂದಿಗೆ ದಾಖಲೆಗಳನ್ನು ಬಿಡುಗಡೆಗೊಳಿಸಿದ ಡಾಟಾ ವಿಜ್ಞಾನಿ ಹಾಗೂ ಸ್ವತಂತ್ರ ಸಂಶೋಧಕ ಶ್ರೀನಿವಾಸ ಕೋಡಾಲಿ ಅವರು,ಭಾರಿ ಪ್ರಮಾಣದಲ್ಲಿ ಮತದಾರರ ಹೆಸರುಗಳು ಕೈಬಿಟ್ಟು ಹೋಗಿರುವ ಹಿನ್ನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದವು. ಆದರೆ ಯಾವುದೇ ಕ್ರಮವನು ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.
ಮತದಾರರ ಪಟ್ಟಿಗಳನ್ನು ಸಿದ್ಧಗೊಳಿಸುವ ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ ಎಂದು ಅವರು ಆರೋಪಿಸಿದರು.