ಅಮೆರಿಕ ಪಾಕಿಸ್ತಾನಕ್ಕೆ ನೆರವು ನಿಧಿ ನೀಡಬಾರದು: ನಿಕ್ಕಿ ಹೇಲಿ

Update: 2019-02-26 17:40 GMT

ನ್ಯೂಯಾರ್ಕ್, ಫೆ. 26: ಭಯೋತ್ಪಾದಕರಿಗೆ ಆಶ್ರಯ ನೀಡುವ ಸುದೀರ್ಘ ಇತಿಹಾಸವನ್ನೇ ಪಾಕಿಸ್ತಾನಹೊಂದಿದೆ, ಹಾಗಾಗಿ, ಅದು ತನ್ನ ವರ್ತನೆಯನ್ನು ಸುಧಾರಿಸುವವರೆಗೆ ಅದಕ್ಕೆ ಒಂದು ಡಾಲರ್ ಹಣವನ್ನೂ ಅಮೆರಿಕ ಕೊಡಬಾರದು ಎಂದು ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿ, ಭಾರತೀಯ ಅಮೆರಿಕನ್ ನಿಕ್ಕಿ ಹೇಲಿ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವನ್ನು ಜಾಣತನದಿಂದ ನಿರ್ಬಂಧಿಸಿರುವುದಕ್ಕಾಗಿ ಅವರು ಅಮೆರಿಕದ ಟ್ರಂಪ್ ಆಡಳಿತವನ್ನು ಶ್ಲಾಘಿಸಿದರು.

ಬೇರೆ ದೇಶಗಳಿಗೆ ಅಮೆರಿಕವು ನೆರವನ್ನು ನೀಡುವಾಗ, ‘‘ನಮ್ಮ ಔದಾರ್ಯಕ್ಕೆ ಪ್ರತಿಯಾಗಿ ನಮಗೆ ಏನು ಸಿಗುತ್ತದೆ ಎಂದು ಅಮೆರಿಕ ಕೇಳುವುದು ನ್ಯಾಯೋಚಿತವಾಗಿಯೇ ಇದೆ’’ ಎಂದು ಅವರು ನುಡಿದರು. ಆದರೆ, ಅದರ ಬದಲಿಗೆ ಪಾಕಿಸ್ತಾನವು ಹಲವು ವಿಷಯಗಳಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ನಿಲುವನ್ನು ವಿರೋಧಿಸುತ್ತಾ ಬಂದಿದೆ’’ ಎಂದರು.

‘‘2017ರಲ್ಲಿ ಪಾಕಿಸ್ತಾನವು ಸುಮಾರು 1 ಬಿಲಿಯ ಡಾಲರ್ (ಸುಮಾರು 7,100 ಕೋಟಿ ರೂಪಾಯಿ) ಮೊತ್ತವನ್ನು ಅಮೆರಿಕದಿಂದ ನೆರವಿನ ರೂಪದಲ್ಲಿ ಪಡೆದುಕೊಂಡಿತು. ನೆರವಿನ ಹೆಚ್ಚಿನ ಭಾಗ ಪಾಕಿಸ್ತಾನದ ಸೇನೆಗೆ ಹೋಯಿತು. ಸ್ವಲ್ಪ ಭಾಗ ರಸ್ತೆ, ಹೆದ್ದಾರಿ ಮತ್ತು ಇಂಧನ ಯೋಜನೆಗಳಿಗೆ ಹೋಯಿತು’’ ಎಂದು ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ ಹೇಲಿ ತಿಳಿಸಿದ್ದಾರೆ.

‘‘ವಿಶ್ವಸಂಸ್ಥೆಯಲ್ಲಿ ನಡೆದ ಎಲ್ಲ ಪ್ರಮುಖ ಮತದಾನಗಳಲ್ಲಿ, ಪಾಕಿಸ್ತಾನವು ಅಮೆರಿಕದ ನಿಲುವನ್ನು 76 ಶೇಕಡದಷ್ಟು ಬಾರಿ ವಿರೋಧಿಸಿದೆ. ಅದಕ್ಕಿಂತಲೂ ಹೆಚ್ಚಿನ ತೊಂದರೆಯೆಂದರೆ, ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಹಾಗೂ ಈ ಭಯೋತ್ಪಾದಕರು ಅಫ್ಘಾನಿಸ್ತಾನದಲ್ಲಿನ ನಮ್ಮ ಸೈನಿಕರನ್ನು ಕೊಂದಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News