×
Ad

‘ನಮ್ಮೂರು ನೆಕ್ಕಿಲಾಡಿ’ಯಿಂದ ಬಡ ಮಹಿಳೆಗೆ ಮನೆ ಕೊಡುಗೆ

Update: 2019-02-27 19:15 IST

ಉಪ್ಪಿನಂಗಡಿ, ಫೆ.27: ‘ನಮ್ಮೂರು- ನೆಕ್ಕಿಲಾಡಿ’ ಸಂಘಟನೆಯ ನೇತೃತ್ವದಲ್ಲಿ ಸಮಾಜದ ಸಹೃದಯಿ ದಾನಿಗಳನ್ನು ಒಗ್ಗೂಡಿಸಿಕೊಂಡು 34ನೇ ನೆಕ್ಕಿಲಾಡಿ ಗ್ರಾಮದ ಬೀತಲಪ್ಪುವಿನ ಸುಶೀಲಾ ಎಂಬವರಿಗೆ ಪುನರ್ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಬುಧವಾರ ನಡೆಯಿತು.

ಮನೆ ಪುನರ್‌ನಿರ್ಮಾಣಕ್ಕೆ ಸಹಾಯಹಸ್ತ ನೀಡಿದ ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಸುಶೀಲಾರಿಗೆ ಕೀ ಹಸ್ತಾಂತರಿಸಿದರು. ‘ನಮ್ಮೂರು- ನೆಕ್ಕಿಲಾಡಿ’ ಉಪಾಧ್ಯಕ್ಷೆ ಅನಿ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದಾನಿ ಅಲ್ ಮದೀನಾ ಆದಂ, ಮುಖ್ಯ ಅತಿಥಿಗಳಾದ ಶಾಂತಿನಗರ ಮಹಾವಿಷ್ಣು ದೇವಾಲಯದ ಆಡಳಿತ ಮೊಕ್ತೇಸರ ಯು.ಜಿ.ರಾಧಾ, ಮೆಸ್ಕಾಂ ಎಇ ರಾಜೇಶ್, ಪತ್ರಕರ್ತ ಶಿವಕುಮಾರ್‌ರವರು ಸುಶೀಲಾರಿಗೆ ಅಕ್ಕಿ, ದಿನಸಿ ಸಾಮಗ್ರಿ ಹಸ್ತಾಂತರಿಸುವ ಮೂಲಕ ಮನೆ ತುಂಬಿಸಿದರು.

‘ನಮ್ಮೂರು- ನೆಕ್ಕಿಲಾಡಿ’ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಉಮೇಶ್ ಶೆಣೈ, ರಾಜಾರಾಮ್ ಕೋಲ್ಪೆಗುತ್ತು, ಕೃಷ್ಣಪ್ರಸಾದ್ ಬೊಳ್ಳಾವು, ‘ನಮ್ಮೂರು - ನೆಕ್ಕಿಲಾಡಿ’ಯ ಜೊತೆ ಕಾರ್ಯದರ್ಶಿ ಸತ್ಯವತಿ ಪೂಂಜಾ, ಶಬೀರ್, ಫಾರೂಕ್ ಝಿಂದಗಿ ಮತ್ತಿತರರು ಉಪಸ್ಥಿತರಿದ್ದರು.

ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ವಿನೀತ್ ಶಗ್ರಿತ್ತಾಯ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನ ನಡೆಯಿತು.

‘ನಮ್ಮೂರು- ನೆಕ್ಕಿಲಾಡಿ’ಯ ಖಲಂದರ್ ಶಾಫಿ ಸ್ವಾಗತಿಸಿ, ವಂದಿಸಿದರು. ಝಕಾರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News