ಗರಿಷ್ಠ ಸಂಯಮ ಕಾಯ್ದುಕೊಳ್ಳಲು ಭಾರತ, ಪಾಕ್‌ಗೆ ಗುಟೆರಸ್ ಕರೆ

Update: 2019-02-27 14:35 GMT

ವಿಶ್ವಸಂಸ್ಥೆ, ಫೆ. 27: ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪರಿಸ್ಥಿತಿಯನ್ನು ‘ಅತ್ಯಂತ ನಿಕಟ’ವಾಗಿ ಗಮನಿಸುತ್ತಿದ್ದಾರೆ ಹಾಗೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದನ್ನು ತಡೆಯಲು ಗರಿಷ್ಠ ಸಂಯಮವನ್ನು ವಹಿಸುವಂತೆ ಎರಡೂ ದೇಶಗಳ ಸರಕಾರಗಳಿಗೆ ಮನವಿ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜರಿಕ್ ಮಂಗಳವಾರ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ತರಬೇತಿ ಕೇಂದ್ರವೊಂದರ ಮೇಲೆ ಭಾರತೀಯ ಯುದ್ಧವಿಮಾನಗಳು ಮಂಗಳವಾರ ಮುಂಜಾನೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ.

ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ ಉಂಟಾಗಿರುವ ಸಂಭಾವ್ಯ ಸಾವು-ನೋವುಗಳ ಬಗ್ಗೆ ಗುಟೆರಸ್‌ಗೆ ಯಾವುದೇ ಮಾಹಿತಿಯಿಲ್ಲ, ಅವರು ಮಾಧ್ಯಮ ವರದಿಗಳ ಮೂಲಕ ಈ ಘಟನೆಯು ಅವರ ಗಮನಕ್ಕೆ ಬಂದಿದೆ ಎಂದು ಡುಜರಿಕ್ ಹೇಳಿದರು.

ಗುಟೆರಸ್ ಜಿನೇವದಿಂದ ನ್ಯೂಯಾರ್ಕ್‌ಗೆ ಹಿಂದಿರುಗುತ್ತಿದ್ದಾರೆ ಹಾಗೂ ಅವರು ವಿಮಾನ ಹತ್ತುವ ಮೊದಲು, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪರಿಸ್ಥಿತಿಯ ಬಗ್ಗೆ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News