ಭಯೋತ್ಪಾದನೆ ವಿರುದ್ಧ ಸಂಘಟಿತ ಅಂತರ್‌ರಾಷ್ಟ್ರೀಯ ಪ್ರಯತ್ನ: ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಸುಶ್ಮಾ ಸ್ವರಾಜ್ ಒತ್ತಾಯ

Update: 2019-02-27 15:01 GMT

ವುಝೆನ್ (ಚೀನಾ), ಫೆ. 27: ಭಯೋತ್ಪಾದನೆಯ ವಿರುದ್ಧ ಸಂಘಟಿತ ಅಂತರ್‌ರಾಷ್ಟ್ರೀಯ ಪ್ರಯತ್ನಗಳನ್ನು ನಡೆಸುವಂತೆ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಚೀನಾದ ವುಝೆನ್‌ನಲ್ಲಿ ಬುಧವಾರ ನಡೆದ ‘ರಿಕ್’ (ರಶ್ಯ-ಭಾರತ-ಚೀನಾ) ವಿದೇಶ ಸಚಿವರ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ರಶ್ಯ ಮತ್ತು ಚೀನಾಗಳ ವಿದೇಶ ಸಚಿವರಿಗೆ ಮಾಹಿತಿ ನೀಡಿರುವುದಾಗಿ ಸ್ವರಾಜ್ ಹೇಳಿದರು.

ಭಯೋತ್ಪಾದನೆ ಇಡೀ ಜಗತ್ತಿಗೆ ಎದುರಾದ ಬೆದರಿಕೆಯಾಗಿದೆ ಹಾಗೂ ಇದರ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ ಎಂಬುದಾಗಿ ಅವರು ಹೇಳಿದರು.

‘‘ಭಯೋತ್ಪಾದನೆ ವಿರುದ್ಧ ಹೋರಾಡಲು ನಮಗೆ ಜಾಗತಿಕ ತಂತ್ರಗಾರಿಕೆ, ಜಾಗತಿಕ ಸಹಕಾರದ ಅಗತ್ಯವಿದೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯ ಸ್ಥಾಪನೆ ಬಗ್ಗೆ ಹಾಗೂ ಭಾರತ ಪ್ರಸ್ತಾಪಿಸಿದ ಸಮಗ್ರ ಅಂತರ್‌ರಾಷ್ಟ್ರೀಯ ಭಯೋತ್ಪಾದನೆ ಸಮಾವೇಶ (ಸಿಸಿಐಟಿ)ವನ್ನು ಅಂತಿಮಗೊಳಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ ಎಂಬುದನ್ನು ತಿಳಿಸಲು ನಾನು ಸಂತೋಷ ಪಡುತ್ತೇನೆ’’ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವ ವಾಂಗ್ ಯಿ, ಭಯೋತ್ಪಾದನೆಯ ‘ಉತ್ಪಾದನಾ ನೆಲ’ವನ್ನು ನಿರ್ಮೂಲಗೊಳಿಸುವುದು ಇಂದಿನ ಅಗತ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News