ಭಾರತ ನಡೆಸಿದ್ದು ‘ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ’

Update: 2019-02-27 15:17 GMT

ವಾಶಿಂಗ್ಟನ್, ಫೆ. 27: ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿನ ಅತಿ ದೊಡ್ಡ ತರಬೇತಿ ಶಿಬಿರದ ಮೇಲೆ ಭಾರತ ನಡೆಸಿದ ‘ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ’ಗೆ ಪ್ರತಿಯಾಗಿ ಯಾವುದೇ ‘ಸೇನಾ ಕ್ರಮ’ವನ್ನು ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವಂತೆ ಅಮೆರಿಕ ಮಂಗಳವಾರ ಪಾಕಿಸ್ತಾನಕ್ಕೆ ಸೂಚಿಸಿದೆ.

ಅದೇ ವೇಳೆ, ಪಾಕಿಸ್ತಾನದ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನವು ತುರ್ತಾಗಿ ‘ಅರ್ಥಪೂರ್ಣ ಕ್ರಮ’ ತೆಗೆದುಕೊಳ್ಳಬೇಕಾದ ಅಗತ್ಯವನ್ನೂ ಅಮೆರಿಕ ಪ್ರತಿಪಾದಿಸಿದೆ.

ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಅವರಿಗೆ ಕರೆಗಳನ್ನು ಮಾಡಿ ಈ ಸಂದೇಶವನ್ನು ತಲುಪಿಸಿದರು ಎಂದು ವಿದೇಶಾಂಗ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿನ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯು ‘ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ’ಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ಸುಶ್ಮಾ ಸ್ವರಾಜ್‌ಗೆ ಮಾಡಿದ ಕರೆಯ ಬಗ್ಗೆ ಮಾತನಾಡಿದ ಪಾಂಪಿಯೊ, ‘‘ನಮ್ಮ ನಿಕಟ ಭದ್ರತಾ ಭಾಗೀದಾರಿಕೆ ಹಾಗೂ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಜಂಟಿ ಉದ್ದೇಶಗಳಿಗೆ ಒತ್ತು ನೀಡುವ ಸಲುವಾಗಿ ಅವರೊಂದಿಗೆ ಮಾತನಾಡಿದೆ’’ ಎಂದರು.

‘‘ನಾನು ಪಾಕಿಸ್ತಾನದ ವಿದೇಶ ಸಚಿವರೊಂದಿಗೂ ಮಾತನಾಡಿದೆ. ಸೇನಾ ಕ್ರಮವನ್ನು ತಡೆಹಿಡಿಯುವ ಮೂಲಕ ಈಗ ನೆಲೆಸಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ಅಗತ್ಯವನ್ನು ಪ್ರತಿಪಾದಿಸಿದೆ. ಪಾಕಿಸ್ತಾನದ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಲು ಈಗ ಸಕಾಲ ಎಂದು ಹೇಳಿದೆ’’ ಎಂದು ಪಾಂಪಿಯೊ ನುಡಿದರು.

‘‘ಭಾರತ ಮತ್ತು ಪಾಕಿಸ್ತಾನಗಳು ಸಂಯಮ ವಹಿಸಲು ಹಾಗೂ ಉದ್ವಿಗ್ನತೆ ಹೆಚ್ಚುವುದನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಇಬ್ಬರೂ ಸಚಿವರಿಗೆ ತಿಳಿಸಿದೆ. ಇನ್ನಷ್ಟು ಸೇನಾ ಚಟುವಟಿಕೆಯನ್ನು ತಪ್ಪಿಸಲು ನೇರ ಮಾತುಕತೆಗಳಿಗೆ ಆದ್ಯತೆ ನೀಡುವಂತೆ ಇಬ್ಬರೂ ಸಚಿವರನ್ನು ನಾನು ಪ್ರೋತ್ಸಾಹಿಸಿದ್ದೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News