ನಾಯಿ ಬೇಟೆಗೆ ಮಣಿಪಾಲಕ್ಕೆ ಬಂದ ಚಿರತೆ !
ಮಣಿಪಾಲ, ಫೆ.27: ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ವಿದ್ಯಾರತ್ನ ನಗರ ಎಂಬಲ್ಲಿ ಫೆ. 26ರಂದು ರಾತ್ರಿ 7.50ರ ಸುಮಾರಿಗೆ ಚಿರತೆ ಯೊಂದು ಕಂಡುಬಂದಿದ್ದು, ಚಿರತೆಯು ಮನೆಯೊಂದರ ಗೇಟಿನ ಬಳಿ ಹಾದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮನೆಯ ನಾಯಿಗಳು ಜೋರಾಗಿ ಬೊಗಳುವುದನ್ನು ಕಂಡ ವಿದ್ಯಾರತ್ನ ನಗರದ ಬಿ.ಜಿ.ಮೋಹನ್‌ದಾಸ್ ಎಂಬವರು ಮನೆಯ ಹೊರಗಡೆ ಬಂದು ನೋಡಿದಾಗ ಮನೆಯ ಸಣ್ಣ ಗೇಟಿನ ಬಳಿ ಹೊರಗಡೆಯಿಂದ ಚಿರತೆ ಹಾಗೂ ಒಳಗಿನಿಂದ ನಾಯಿ ಮುಖಾಮುಖಿಯಾಗಿತ್ತು. ಕೂಡಲೇ ಅವರು ಬೊಬ್ಬೆ ಹಾಕಿದಾಗ ಚಿರತೆ ಓಡಿ ಮರೆಯಾಯಿತ್ತೆನ್ನಲಾಗಿದೆ.
ಬೆಳಗ್ಗೆ ಮನೆಯ ಸಿಸಿಟಿವಿ ಪರಿಶೀಲನೆ ಮಾಡಿದಾಗ ಮನೆಯ ಪ್ರಮುಖ ಗೇಟಿನ ಬಳಿ ಚಿರತೆ ಹಾದು ಹೋಗಿರುವುದು ಕಂಡುಬಂದಿದೆ. ಆ ಸಮಯ ದಲ್ಲಿ ದಾರಿದೀಪ ಕೂಡ ಇರದ ಕಾರಣ ಚಿರತೆ ಬೇರೆ ಯಾರ ಕಣ್ಣಿಗೂ ಕಾಣಿಸಿಲ್ಲ ಎಂದು ಬಿ.ಜಿ.ಮೋಹನ್‌ದಾಸ್ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಈ ಪ್ರದೇಶದಲ್ಲಿ ಚಿರತೆ ತಿರುಗಾಡುತ್ತಿದ್ದ ಒಂದು ಮನೆಯ ನಾಯಿ ಮತ್ತು ಕರುವನ್ನು ತಿಂದಿದೆ. ಅಲ್ಲೇ ಸಮೀಪದಲ್ಲೇ ಹಾಡಿ ಇರುವುದರಿಂದ ಚಿರತೆ ಅಲ್ಲೇ ವಾಸವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.
‘ವಿದ್ಯಾರತ್ನನಗರದಲ್ಲಿ ನಿನ್ನೆ ರಾತ್ರಿ ಚಿರತೆ ಬಂದಿರುವ ಮಾಹಿತಿ ದೊರೆತಿದ್ದು, ಈ ಬಗ್ಗೆ ಪರಿಶೀಲನೆಗೆ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಅವರ ವರದಿಯಂತೆ ಮುಂದಿನ ಕ್ರಮ ಜರಗಿಸಲಾಗುವುದು’ ಎಂದು ಉಡುಪಿ ವಲಯ ಅರಣ್ಯ ಅಧಿಕಾರಿ ಕ್ಲಿಫರ್ಡ್ ಲೋಬೊ ಪತ್ರಿಕೆಗೆ ತಿಳಿಸಿದ್ದಾರೆ.